ಬೆಂಗಳೂರು, ಡಿ 10 (MSP): ಹೆತ್ತ ತಾಯಿಗೆ ಪೊರಕೆಯಿಂದ ಹೊಡೆದು ಕ್ಲಾಸ್ ತೆಗೆದುಕೊಂಡ ಪ್ರಕರಣದಲ್ಲಿ ಮಗನಿಗೆ ಕ್ಷಮಾ ಭಿಕ್ಷೆ ನೀಡಲು ತಾಯಿ ನಿರ್ಧರಿಸಿದ್ದಾರೆ.
ಬೆಂಗಳೂರಿನ ಜೆ ಪಿ ನಗರ ನಿವಾಸಿಯಾಗಿದ್ದ ಜೀವನ್ (19) ತನಗೆ ಬುದ್ದಿವಾದ ಹೇಳಿದ ತಾಯಿಗೆ ಪೊರಕೆಯಿಂದ ಹೊಡೆದು ನನ್ನ ಬಗ್ಗೆ ಹೊರಗಡೆ ಎಲ್ಲದರೂ ಮಾತನಾಡಿದರೆ ನಿನಗೆ ಇದೇ ರೀತಿ ಟ್ರೀಟ್ಮೆಂಟ್ ಕೊಡಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದ. ಅಲ್ಲದೇ ಜೀವನ್ ತನ್ನ ತಾಯಿಗೆ ಪೊರಕೆಯಲ್ಲಿ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲೆಡೆ ಆತನ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸಿಗರೇಟ್ ಸೇದುವ ಬಗ್ಗೆ ಹಾಗೂ ಅಪ್ರಾಪ್ತಳ ಜೊತೆಗಿನ ಲವ್ ಕಹಾನಿ ಬಗ್ಗೆ ತಾಯಿ ತನ್ನ ಮಗ ಜೀವನ್ನನ್ನು ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಜೀವನ್ ತಾಯಿಯ ಮೇಲೆ ಕೈ ಮಾಡಿದ್ದ. ಭಾನುವಾರ ರಾತ್ರಿ ಜೀವನ್ ಮೇಲೆ ಜೆ.ಪಿ ನಗರದ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದ ಹಿನ್ನೆಲೆ ಆತನನ್ನು ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಹೆತ್ತ ಕರುಳು ಮಗನನ್ನು ದಯವಿಟ್ಟು ಬಿಟ್ಟು ಬಿಡಿ . ಬುದ್ದಿ ಹೇಳಿ ಕಳುಹಿಸಿ ಎಂದು ಪೊಲೀಸರ ಮುಂದೆ ಗೋಗರೆದಿದ್ದಾರೆ. ಆತನ ತಾಯಿಯ ಮನವಿಗೆ ಸ್ಪಂದಿಸಿದ ಪೊಲೀಸರು ಜೀವನ್ ಗೆ ಬುದ್ದಿವಾದ ಹೇಳಿ ಆತನಿಗೆ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.
ಅಲ್ಲದೆ ಜೀವನ್ ಬಾಲಾಪರಾಧಿ ತಿಳಿದು ಬಂದಿದ್ದು ಮಂಗಳವಾರ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹುಡುಗನನ್ನ ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.