ಬೆಂಗಳೂರು, ಡಿ 10 (MSP): ಪತಿರಾಯನೊಬ್ಬ ತನ್ನ ಪತ್ನಿಗೆ ವಾಟ್ಸಪ್ನಲ್ಲೇ ತಲಾಖ್ ಎಂದು ಹೇಳಿ ಆಕೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಮೇರಿಕಾದಲ್ಲಿ ಡಾಕ್ಟರ್ ವೃತ್ತಿಯಲ್ಲಿದ್ದ ಜಾವೀದ್ ಖಾನ್ ಪತ್ನಿಗೆ ಕೈಕೊಟ್ಟು ಪರಾರಿಯಾಗಿರುವ ಪತಿ. ಇದೀಗ ಈತನ ವಿರುದ್ದ ಪತ್ನಿ ರೇಷ್ಮಾ ಅಜೀಜ್ ಕಾನೂನು ಸಮರ ಸಾರಲು ಮುಂದಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಶಾಸಕ ಸುರೇಶ್ ಕುಮಾರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಬಳಿ ತೆರಳಿ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದಾರೆ.
2003ರಲ್ಲಿ ಜಾವೀದ್ ಹಾಗೂ ರೇಷ್ಮಾ ವಿವಾಹವಾಗಿದ್ದರು. ಆ ಬಳಿಕ ಇವರು ಇಂಗ್ಲೆಂಡ್ ನಲ್ಲಿ ನೆಲೆಸಿ ನಂತರ ಅಮೆರಿಕಾಕ್ಕೆ ಹೋಗಿ ನೆಲೆಸಿದ್ದರು. ಜಾವೀದ್ ಹಾಗೂ ರೇಷ್ಮಾ ದಂಪತಿಗೆ 13 ವರ್ಷದ ಮಗಳು ಹಾಗೂ 10 ಮಗನಿದ್ದಾನೆ. ಸರಿಯಾಗಿದ್ದ ಸಂಸಾರ ಇತ್ತೀಚೆಗೆ ತಾಳ ತಪ್ಪಿತ್ತು. ಇದ್ದಕ್ಕೆ ಕುಟುಂಬದ ಹಿರಿಯರೊಡನೆ ಚರ್ಚಿಸಿ ಸಮಸ್ಯೆ ಕಂಡುಕೊಳ್ಳಲೆಂದು ಮಕ್ಕಳನ್ನು ಅಮೆರಿಕಾದಲ್ಲೇ ಬಿಟ್ಟು ದಂಪತಿಗಳು ಮಾತ್ರ ನವೆಂಬರ್ 30ರಂದು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಏರ್ ಪೋರ್ಟ್ ನಲ್ಲಿ ಬಣ್ಣ ಬದಲಾಯಿಸಿದ ಪತಿ ಜಾವೀದ್ ಹೆಂಡತಿ ರೇಷ್ಮಾಳ ಫಾಸ್ ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನು ಕಿತ್ತುಕೊಂಡು, ಬೌನ್ಸರ್ಗಳ ಭದ್ರತೆಯಲ್ಲಿ ರೇಷ್ಮಾಳನ್ನು ಬಿಟ್ಟು ತಾನು ಮತ್ತೆ ಅಮೇರಿಕಾಗೆ ವಾಪಾಸ್ ಆಗಿದ್ದಾನೆ. ಬಳಿಕ ಅಲ್ಲಿಂದ ಜಾವೀದ್ ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್ ಮೂಲಕ ತಲಾಖ್ ನೀಡಿದ್ದಾನೆ.