ಮಂಗಳೂರು,ಡಿ 10 (MSP): ನಗರದಲ್ಲಿ ನಡೆದ 07 ಸರಗಳ್ಳತನ ಪ್ರಕರಣವನ್ನು ಭೇದಿಸಿದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 3.64 ಲಕ್ಷದ 126.960 ಗ್ರಾಂ ಚಿನ್ನದ ಆಭರಣ ಹಾಗೂ ಆಕ್ಟಿವಾ ಸ್ಕೂಟರ್ ಸಮೇತ ಒಟ್ಟು 3,74 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ದೇರಳಕಟ್ಟೆಯ ಕೋಟೆಕಾರ್ ಗ್ರಾಮದ ಕೊಂಡಾಣ ಮನೆಯ ಶ್ರೀಧರ ನಾಥ್ ಅವರ ಪುತ್ರ ಹರೀಶ್ ಎಸ್ ನಾಥ್(45) ಮತ್ತು ಕಂಕನಾಡಿ ಬಜಾಲ್ ನ ಪಕ್ಕಲಡ್ಕದ ಚಂದ್ರಹಾಸ ಅವರ ಪುತ್ರ ರಾಜೇಶ್(45) ಎಂದು ಗುರುತಿಸಲಾಗಿದೆ. ಇವರು ಪಾದಚಾರಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಆಕ್ಟೀವಾ ಸ್ಕೂಟರ್ ನಲ್ಲಿ ಬಂದು ಎಗರಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇವರ ವಿರುದ್ದ ಮಂಗಳೂರು ನಗರದಲ್ಲಿ ಉರ್ವ ಪೊಲೀಸ್ ಠಾಣೆ ಯಲ್ಲಿ 1 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 2. ಪ್ರಕರಣ, ಕದ್ರಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ,ಕಾವೂರು ಠಾಣೆಯಲ್ಲಿ 1 ಪ್ರಕರಣ ಮತ್ತು ದಕ್ಷಿಣ ಠಾಣೆ ಯಲ್ಲಿ 2 ಸುಲಿಗೆ ಯತ್ನ ಪ್ರಕರಣಗಳು ದಾಖಲಾಗಿದೆ.