ಕುಂದಾಪುರ, ಡಿ 10(SM): ನಾಲ್ಕು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಇಂದು ಕುಂದಾಪುರದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಮಹಮ್ಮದ್ ಜುನೈದ್ ಹಾಗೂ ವೆಲ್ಡಿಂಗ್ ಜಾಫರ್ ಪ್ರಕರಣದ ಆರೋಪಿಗಳು.
ಆರೋಪಿಗಳಿಗೆ ಐಪಿಸಿ ಸೆಕ್ಷನ್ 451ರಂತೆ ಒಂದು ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂಪಾಯಿ ದಂಡ, ಐಪಿಸಿ ಸೆಕ್ಷನ್ 427ರಂತೆ 2 ವರ್ಷ ಕಠಿಣ ಸಜೆ ಮತ್ತು ಹತ್ತು ಸಾವಿರ ರೂಪಾಯಿಗಳ ದಂಡ, ಮತ್ತು ಐಪಿಸಿ ಸೆಕ್ಷನ್ 436ರಂತೆ ಏಳು ವರ್ಷ ಕಠಿಣ ಸಜೆ ಮತ್ತು ಇಪ್ಪತ್ತು ಸಾವಿರ ರೂಪಾಯಿ ದಂಡ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಆರೋಪಿಗಳಿಬ್ಬರ ವಿಚಾರಣೆ ನಡೆಸಿದ್ದರು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಇನ್ನು ೨೦೧೫ರ ಜನವರಿ 21ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮುಖ್ಯರಸ್ತೆಯ ಸಮೀಪವೇ ಇರುವ ವೆಂಕಟೇಶ ಶೆಣೈ ಮಾಲೀಕತ್ವದ ವೆಂಕಟೇಶ್ವರ ಸ್ಟೋರ್ಸ್ ಗೆ ಸಂಬಂಧಿಸಿದ ಗೋದಾಮು ಹಾಗೂ ಮನೆಯ ಮುಂಭಾಗ ಪಾರ್ಕ್ ಮಾಡಿದ್ದ ಚವರ್ಲೆಟ್ ಎಂಜಾಯ್ ಕಾರು, ರಿಟ್ಜ್ ಹಾಗೂ 407 ವಾಹನಕ್ಕೆ ಬೆಂಕಿ ಹಾಕಿದ ಪ್ರಕರಣ ನಡೆದಿತ್ತು. ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ದಾಖಲೆಯಾದ ವಿಡಿಯೋ ಆಧರಿಸಿ ಪೊಲೀಸರು ಗಂಗೊಳ್ಳಿ ಮೂಲದ ಮಹಮ್ಮದ್ ಜುನೈದ್, ವೆಲ್ಡಿಂಗ್ ಜಾಫರ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಕೋಮು ಸೂಕ್ಷ್ಮ ಪ್ರದೇಶವೆಂದು ಬಿಂಬಿತವಾದ ಗಂಗೊಳ್ಳಿಯ ಮುಖ್ಯರಸ್ತೆಯ ಸನಿಹದಲ್ಲೇ ಇದ್ದ ವೆಂಕಟೇಶ್ವರ ಸ್ಟೋರ್ಸ್ ಅಂಗಡಿಗೆ ಜ.21 ರಂದು ರಾತ್ರಿ ಅಪರಿಚಿತ ಇಬ್ಬರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಇದೇ ವೇಳೆ ಅಂಗಡಿಯ ಮುಂಭಾಗದಲ್ಲಿ ಶಬ್ಧವಾಗುತ್ತಿರುವುದನ್ನು ಕೇಳಿಸಿಕೊಂಡ ಅಂಗಡಿ ಮಾಲೀಕ ವೆಂಕಟೇಶ್ ಶೆಣೈ ಎಂಬುವರು ಹೊರಗಡೆ ಬರುತ್ತಿದ್ದಂತೆ, ದುಷ್ಕರ್ಮಿಗಳು ಬೆಂಕಿ ಹಚ್ಚಲು ಮುಂದಾಗಿದ್ದರು. ವೆಂಕಟೇಶ ಶೆಣೈ ಬೆಂಕಿ ಹಚ್ಚದಂತೆ ಕೂಗಾಡಿದರೂ ಲೆಕ್ಕಿಸದೇ ಬೆಂಕಿಯಿಟ್ಟು ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಅಂದಿನ ಉಡುಪಿ ಎಸ್ಪಿಯಾಗಿದ್ದ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಬೈಂದೂರು ಸಿಪಿಐ ಸುದರ್ಶನ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುಬ್ಬಣ್ಣ ಹಾಗೂ ತಂಡ ಸಿ.ಸಿ. ಟಿವಿ ಪೂಟೇಜ್ ಸೇರಿದಂತೆ ಇನ್ನಿತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರೋಪಿಗಳನ್ನು ಕೇವಲ ಹದಿನೈದು ದಿನಗಳ ಅಂತರದಲ್ಲಿ ಬಂಧಿಸಿದ್ದರು.