ಮಂಗಳೂರು, ಡಿ 11(MSP): ಅಪ್ರಾಪ್ತ ವಯಸ್ಕಳೊಬ್ಬಳನ್ನು ಬೆದರಿಸಿ ಆರು ತಿಂಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದ ಸುರತ್ಕಲ್ನ ಕಾಟಿಪಳ್ಳ ಎರಡನೇ ಬ್ಲಾಕ್ ನಿವಾಸಿ ಹಮೀದ್ (44) ಎನ್ನುವಾತನಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
2014ರಲ್ಲಿ ಈ ಪ್ರಕರಣ ನಡೆದಿದ್ದು ವಿಚಾರಣೆ ಪೂರ್ಣಗೊಳಿಸಿದ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪಲ್ಲವಿ ಬಿ.ಆರ್ ಅವರು ಪ್ರಕರಣದಲ್ಲಿ ಆರೋಪಿಯಾಗಿದ್ದ ಹಮೀದ್ ನನ್ನು ಅಪರಾಧಿ ಎಂದು ತೀರ್ಪು ನೀಡಿ ಆತನಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದರು. 14 ವರ್ಷದವಳಾಗಿದ್ದ ಸಂತ್ರಸ್ತೆ ಬಾಲಕಿ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಸಂದರ್ಭ ಆಕೆಯ ಮನೆಗೆ ಆರೋಪಿಯ ಆಗ್ಗಾಗೆ ಹೋಗುವುದಲ್ಲದೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆ ಬಳಿಕ ಆಕೆಯನ್ನು ಮದುವೆ ಆಗುವುದಾಗಿ ಮರಳು ಮಾಡಿ 2014ರ ಫೆಬ್ರುವರಿ 22ರಿಂದ ಆರು ತಿಂಗಳು ಕಾಲ ಅತ್ಯಾಚಾರ ನಡೆಸಿದ್ದ. ಬಳಿಕ ಬಾಲಕಿ ಗರ್ಭಿಣಿ ಎಂದರಿತ ಹಮೀದ್ ಆಕೆಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದ. ಗರ್ಭಪಾತವಾದ ಬಳಿಕ ಸಂತ್ರಸ್ತೆಯನ್ನು ಅಪಹರಿಸಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದರು.
ದಂಡದ ಮೊತ್ತದಲ್ಲಿ 15 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸಂತ್ರಸ್ತರ ಪರಿಹಾರ ನಿಧಿಯಿಂದ ಬಾಲಕಿಗೆ ಪರಿಹಾರ ನೀಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.ಅಪರಾಧಿ ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳು ಕಠಿಣ ಸಜೆ ವಿಧಿಸಲಾಗಿದೆ.
ಸುರತ್ಕಲ್ ಠಾಣೆಯ ಆಗಿನ ಇನ್ಸ್ಪೆಕ್ಟರ್ ಎಂ.ಎ.ನಟರಾಜ್ ಈ ಪ್ರಕರಣದಲ್ಲಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣಸ್ವಾಮಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು. 19 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.