ಮಂಗಳೂರು, ಡಿ 11(MSP): ತೆಂಕಿತಿಟ್ಟಿನ ಅಗ್ರಮಾನ್ಯ ಮದ್ದಳೆಗಾರರಾದ ಧರ್ಮಸ್ಥಳ ಮೇಳದ ಅಡೂರು ಗಣೇಶ ರಾವ್ ಇಂದು ಮುಂಜಾನೆ ವಿಧಿವಶರಾದರು. 50 ವರ್ಷದ ಇವರು ಲಿವರ್ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು. ದೇರಳಕಟ್ಟೆಯ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಡಿ.11 ರ ಮಂಗಳವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಚಂಡೆ ಮದ್ದಳೆಯಲ್ಲಿ ಸಂಪೂರ್ಣ ಸಿದ್ದಿಯನ್ನು ಪಡೆದ ಬೆರಳೆಣಿಕೆ ಕಲಾವಿದರಲ್ಲಿ ಇವರೂ ಒಬ್ಬರಾಗಿದ್ದು, ಇವರು ತನ್ನ 13 ನೇ ವಯಸ್ಸಿನಲ್ಲಿ ಹಿಮ್ಮೇಳವನ್ನು ಕಲಿತಿದ್ದಾರೆ. ಇವರ ಅಜ್ಜ ಹಾಗೂ ತಂದೆ ಮದ್ದಳೆಗಾರರಾಗಿದ್ದು, ಇವರು ಮದ್ದಳೆಯನ್ನು ತಂದೆಯಿಂದಲೇ ಅಭ್ಯಾಸಿಸಿದ್ದರು.
ಮೃತರು ಪತ್ನಿ , ಓರ್ವ ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಇವರು ಪುನರೂರಿನಲ್ಲಿ ವಾಸವಾಗಿದ್ದರು. ಚೆಂಡೆ ಮೂಲಕ ವೃತ್ತಿ ಜೀವನ ಆರಂಭಿಸಿದ ಮೃತರು ಬಳಿಕ ತೆಂಕುತಿಟ್ಟಿನ ಅಗ್ರಮಾನ್ಯ ಮದ್ದಳೆವಾದಕರಾಗಿ ರೂಪುಗೊಂಡಿದ್ದರು.
ಇವರ ನಿಧನಕ್ಕೆ ಯಕ್ಷಾಭಿಮಾನಿಗಳು ಅಪಾರ ಕಂಬನಿ ಮಿಡಿದಿದ್ದಾರೆ.