ಬ್ರಹ್ಮಾವರ,ಡಿ 11(MSP): ದ.ಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಉಭಯ ಜಿಲ್ಲೆಗಳ ರೈತಾಪಿಗಳ ಏಕೈಕ ಆಸ್ತಿಯಾಗಿದ್ದು, 2006ರಿಂದ ಮುಚ್ಚಲ್ಪಟ್ಟಿತ್ತು.ಸುಮಾರು 110 ಎಕರೆ ಭೂಮಿಯನ್ನು ಹೊಂದಿರುವ ಈ ಸಕ್ಕರೆ ಕಾರ್ಖಾನೆಯನ್ನು ರೈತರ ಸ್ವತ್ತಾಗಿ ಉಳಿಸಿಕೊಳ್ಳಬೇಕು ಎನ್ನುವ ನೆಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇತ್ತು. ಅಂದಿನ ದ.ಕ ಜಿಲ್ಲೆಯಲ್ಲಿ ಕಬ್ಬು ಬೆಳೆಯನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾರಾಹಿ ನೀರಾವರಿ ಯೋಜನೆ ಆರಂಭಿಸಿ, ಆ ನೀರನ್ನು ಬಳಸಿಕೊಂಡು ಕಬ್ಬು ಬೆಳೆದು ರೈತ ಸದೃಡನಾಗಬೇಕು ಎನ್ನುವುದು ಸರ್ಕಾರದ ಇಚ್ಛೆ ಆಗಿತ್ತು. ವಾರಾಹಿ ನೀರಾವರಿ ಯೋಜನೆ ಮತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಏಕಕಾಲದಲ್ಲಿ ಗುದ್ದಲಿ ಪೂಜೆ ಆಗಿದ್ದು ಆಯಿತು. 22-01-1985 ರಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸಕ್ಕರೆ ಉತ್ಪಾದನಾ ಕಾರ್ಯ ಪ್ರಾರಂಭಿಸಿ, ದಿನ ವೊಂದಕ್ಕೆ 1250 ಮೆಟ್ರಿಕ್ ಟನ್ ಕಬ್ಬು ಅರೆಯಲಾರಂಭಿಸಿತು. ಆದರೆ ವಾರಾಹಿ ಕಾಮಗಾರಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ನೆಡೆಯದೇ, ರೈತನಿಗೆ ನೀರು ನೀಡುವಲ್ಲಿ ವಿಫಲವಾಯಿತು. ಆವತ್ತೇ ವಾರಾಹಿ ನೀರು ರೈತರಿಗೆ ಸಿಗುತ್ತಿದ್ದರೆ ರೈತರು ಕಬ್ಬು ಬೆಳೆಯಲು ಹಿಂದೆಟು ಹಾಕುತ್ತಿರಲಿಲ್ಲ. ದುರಾದೃಷ್ಟವೆಂದರೆ ವಾರಾಹಿ ನೀರು ಬರುವಾಗ ಸಕ್ಕರೆ ಕಾರ್ಖಾನೆ ಬಂದ್ ಆಯಿತು. ರೈತರ ಏಕೈಕ ಆಶಾಕಿರಣ ಕತ್ತಲೆಯತ್ತ ಸಾಗಿತ್ತು.
ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಅಂಗವಾಗಿ ನಡೆದ ಹೋರಾಟಗಳು, ಸಣ್ಣ ಸಣ್ಣ ಭರವಸೆ ಮೂಡಿಸುತ್ತ ಹೋದವೇ ಹೊರತು ಪ್ರಯೋಜನಕ್ಕೆ ಬರಲಿಲ್ಲ. ಕಾರ್ಖಾನಯ ಸುಪರ್ದಿಯಲ್ಲಿರುವ ಬರೋಬ್ಬರಿ 110 ಎಕರೆ ಬೆಲೆ ಬಾಳುವ ಭೂಮಿಯ ಮೇಲೆ ಹಲವರ ಕಣ್ಣುಗಳು ಬೀಳತೊಡಗಿದವು. ಕಾರ್ಖಾನೆ ಮಾರಾಟಕ್ಕೆ ಆಸ್ಪದ ಕೊಡಬಾರದು ಎಂಬ ದೃಢ ತೀರ್ಮಾನದೊಂದಿಗೆ ಮತ್ತೆ ಕಾರ್ಖಾನೆಯನ್ನು ಪುನರಪಿ ಕಟ್ಟಬೇಕು ಎಂಬ ದಿಟ್ಟ ಹೋರಾಟವನ್ನು ದ.ಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಅಧ್ಯಕ್ಷರು, ನಿರ್ದೇಶಕರು ಮುಂದುವರಿಸಿದರು.
ಕಳೆದ ಸೆಪ್ಟೆಂಬರ್ನಲ್ಲಿ ಮುಖ್ಯಮಂತ್ರಿ ಗಳು ಉಡುಪಿ ಜಿಲ್ಲಾಭಿವೃದ್ದಿ ಸಮೀಕ್ಷೆಯ ಸಭೆಗೆ ಆಗಮಿಸಿದ ಸಂದರ್ಭ ಸಕ್ಕರೆ ಕಾರ್ಖಾನೆ ಪುನಶ್ಚೇತನದ ಬಗ್ಗೆ ಒಲವು ತೋರಿದ್ದರು. ವಾರಾಹಿ ನೀರು ಬಂದಿರುವುದರಿಂದ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬು ಅಭಿವೃದ್ದಿ ಪಡಿಸಲು ಸಲಹೆ ನೀಡಿದ್ದರು.
ಮುಖ್ಯಮಂತ್ರಿಗಳ ಸಲಹೆಯಂತೆ ಕಬ್ಬು ಅಬಿವೃದ್ದಿ ಪಡಿಸುವ ಕುರಿತು ಕಬ್ಬಿನ ಬೀಜೋತ್ಪಾದನೆಗಾಗಿ ಉತ್ತಮ ತಳಿಯ ಹಾಗೂ ಅಧಿಕ ಇಳುವರಿ ನೀಡುವ ಕಬ್ಬಿನ ಗಿಣ್ಣನ್ನು ಮಂಡ್ಯದ ವಿ.ಸಿ ಪಾರ್ಮ್ನಿಂದ ಖರೀಧಿಸಿ ರೈತರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮ ಡಿ.೧೦ರಂದು ಕಾರ್ಖಾನೆಯ ವಠಾರದಲ್ಲಿ ನಡೆಯಿತು.
ಈ ಬಾರಿ ಸುಮಾರು 200 ಎಕರೆ ಪ್ರದೇಶದಲ್ಲಿ ಬೀಜಕ್ಕಾಗಿ ಕಬ್ಬನ್ನು ನಾಟಿ ಮಾಡಲಾಗುವುದು. ಮುಂದಿನ ವರ್ಷ ಆ ಕಬ್ಬಿನಿಂದ ಬೀಜೋತ್ಪಾದನೆ ಮಾಡಿ ಆಸಕ್ತ ರೈತರಿಗೆ ನೀಡಲಾಗುವುದು. ಅಂದರೆ 2020-21ನೇ ಸಾಲಿನಲ್ಲಿ ಕಾರ್ಖಾನೆಯಲ್ಲಿ ಕಬ್ಬು ಅರೆಯಲಾಗುವುದು. ರೈತರು ಕಬ್ಬು ಬೆಳೆಯಲು ಆರಂಭಿಸುತ್ತಿದ್ದಂತೆ ಕಾರ್ಖಾನೆಯ ಅಭಿವೃದ್ದಿ ನಡೆಯಲಿದೆ. ಸುಮಾರು 30 ಕೋಟಿ ರೂಪಾಯಿ ಕಾರ್ಖಾನೆಯ ಪುನಶ್ಚೇತನಕ್ಕೆ ಬೇಕಾಗುತ್ತದೆ. ಈಗಿರುವ ಯಂತ್ರಗಳು ಸಂಪೂರ್ಣ ಕೆಟ್ಟಿದ್ದು ಇವತ್ತಿನ ಕಂಪ್ಯೂಟರೀಕೃತ ವ್ಯವಸ್ಥೆಗೆ ಅವು ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಸಂಪೂರ್ಣ ಹೊಸತಾಗಿ ಯಂತ್ರೋಪಕರಣಗಳ ಜೋಡಣೆ ಮಾಡಿಕೊಳ್ಳಲಾಗುವುದು ಎಂದು ಅಧ್ಯಕ್ಷರಾದ ಜಯಶೀಲ ಶೆಟ್ಟಿ ತಿಳಿಸಿದ್ದಾರೆ.
2017ರಲ್ಲಿಯೇ ನುರಿತ ತಾಂತ್ರಿಕ ತಜ್ಞರುಗಳನ್ನೊಳಗೊಂಡ ಮೆ|ಮಿಟ್ಕಾನ್-ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್, ಪುಣೆ ಇವರಿಂದ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. 30 ಕೋಟಿ ಆರ್ಥಿಕ ನೆರವಿಗಾಗಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆತ್ಯಾಧುನಿಕ ಯಂತ್ರಗಳ ಬಳಕೆ ಮಾಡುವುದರಿಂದ ರೈತರಿಗೆ ಅನುಕೂಲ, ಕಾರ್ಖಾನೆಯೂ ಲಾಭದಾಯಕವಾಗಿ ಬೆಳೆಯುತ್ತದೆ ಎಂದರು.
ವಾರಾಹಿ ನೀರು ಈಗಾಗಲೇ ಶಿರಿಯಾರ ತನಕ ಬರುತ್ತಿದೆ. ಏತ ನೀರಾವರಿಗೂ ಟೆಂಡರ್ ಆಗಿದೆ. ಅದರಿಂದ ೧೫ಸಾವಿರ ಎಕರೆಗೆ ನೀರು ದೊರೆಯಲಿದೆ. ವಾರಾಹಿಯಿಂದ 16 ಟಿಎಂಸಿ ನೀರು ಬರುತ್ತದೆ. ನದಿಯ ನೀರು ಪುನಃ ನದಿಯನ್ನು ಸೇರುವುದರ ಬದಲು ಅದರ ಸದ್ಭಳಕೆ ಮಾಡಿಕೊಳ್ಳಬೇಕು. ಕಬ್ಬು ಅತ್ಯಂತ ಲಾಭದಾಯಕ ಬೆಳೆ. ಸುಧಾರಿತ ತಳಿಗಳು ಬಂದಿವೆ. ಅವುಗಳನ್ನು ಬಳಕೆ ಮಾಡಿ ಒಳ್ಳೆಯ ಆದಾಯ ಪಡೆಯಬಹುದು. ಸರ್ಕಾರ ನಿಗದಿ ಮಾಡಿದ ದರವನ್ನು ಕಾರ್ಖಾನೆ ಪಾವತಿಸುತ್ತದೆ. ಹಾಗಾಗಿ ರೈತರು ಕಬ್ಬು ಬೆಳೆಯಲು ಮನಸ್ಸು ಮಾಡಬೇಕು ಎಂದರು.
ಈಗ ಕಬ್ಬು ಸಸಿಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. 200 ಎಕರೆಗಾಗುವಷ್ಟು ಸಸಿಯನ್ನು ತರಿಸಿದ್ದೇವೆ. ಆಸಕ್ತ ರೈತರಿಗೆ ನಿಗದಿತ ಪ್ರಮಾಣದಲ್ಲಿ ನೀಡಲಿದ್ದೇವೆ. ಕೆಲವು ರೈತರು ದೊಡ್ಡ ಪ್ರಮಾಣದ ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಕಬ್ಬು ಬೆಳೆಯುವ ಆಸಕ್ತರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ರೈತರು ಬೇಗನೇ ಬಂದು ಸಸಿಗಳನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎಸ್.ದಿನಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.