ಉಡುಪಿ, ಡಿ 11(SM):ಜಿಲ್ಲೆಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಮಾಹಿತಿ ಹಾಗೂ ಅಗತ್ಯ ಮಾರ್ಗದರ್ಶನ, ನೆರವು ನೀಡುವಂತಹ ಸ್ಟಾರ್ಟ್ ಅಪ್ ಕೇಂದ್ರವನ್ನು ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ಒಳಗೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಇವರ ಜಂಟಿ ಆಶ್ರಯದಲ್ಲಿ, ಕೈಗಾರಿಕಾ ಹಾಗೂ ಸೇವಾ ವಲಯಗಳ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ, ಯುವ ಉತ್ಸಾಹಿ, ಕೌಶಲ್ಯ ಹೊಂದಿದ ಯುವಕರಿದ್ದು, ಅವರು ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ, ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದು ಸೇರಿದಂತೆ ಹಲವು ಅತ್ಯುತ್ತಮ ಯೋಜನೆಗಳೊಂದಿಗೆ ಉದ್ಯಮ ಪ್ರಾರಂಭಿಸುವ ಆಸಕ್ತಿ ಹೊಂದಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಹಣಕಾಸು ಸಂಸ್ಥೆಗಳಿಂದ ಕಡಿಮೆ ಬಡ್ಡಿ ದರದಲ್ಲಿ ಅಗತ್ಯ ಆರ್ಥಿಕ ನೆರವು ಪಡೆಯುವ, ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವ ಬಗ್ಗೆ ಮಾಹಿತಿ ಇಲ್ಲ.
ಇಂತಹ ಯುವಕರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಣಿಪಾಲ ಕೈಗಾರಿಕಾ ಕೇಂದ್ರದಲ್ಲಿ ಸ್ಟಾರ್ಟ್ ಅಫ್ ಕೇಂದ್ರ ಒಂದು ತಿಂಗಳ ಒಳಗಾಗಿ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಕೇಂದ್ರದಲ್ಲಿ ಹೊಸ ಉದ್ದಿಮೆ ಪ್ರಾರಂಭಿಸಲು ಎಲ್ಲಾ ಅಗತ್ಯ ಮಾರ್ಗದರ್ಶನ ಮತ್ತು ನೆರವು ಪಡೆಯುವ ಕುರಿತಂತೆ ಸಮಗ್ರ ಮಾಹಿತಿ ಒದಗಿಸಲಾಗುವುದು. ಯುವ ಉದ್ದಿಮೆದಾರರು ಇದರ ಪ್ರಯೋಜನ ಪಡೆಯುವಂತೆ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.