ಉಡುಪಿ, ಫೆ 09 (DaijiworldNews/MS): ಹಿಜಾಬ್ ವಿವಾದದಲ್ಲಿ ಹೈಕೋರ್ಟ್ ನಲ್ಲಿ ನಮ್ಮ ಪರ ತೀರ್ಪು ಬಂದರೆ ಸ್ವಾಗತ, ಇಲ್ಲದಿದ್ದರೆ ಸರಕಾರದ ವಿರುದ್ಧ ನಮ್ಮ ಸಮರ ಮುಂದುವರೆಯುತ್ತೆ ಎಂದು ಕ್ಯಾಂಪಸ್ ಫ್ರೆಂಟ್ ಹೇಳಿದೆ.
ಫೆ.09 ರ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಕ್ಯಾಂಪಸ್ ಫ್ರೆಂಟ್ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ, "ಉಡುಪಿಯಲ್ಲಿ ಹಿಜಾಬ್, ಕೇಸರಿ ವಿವಾದಕ್ಕೆ ಶಾಸಕ ರಘುಪತಿ ಭಟ್ ಮತ್ತು ಯಶ್ಪಾಲ್ ಸುವರ್ಣರ ಕುಮ್ಮಕ್ಕಿದ್ದು, ಕಾಲೇಜುಗಳಲ್ಲಿ ಸಂಘ ಪರಿವಾರ ಮತ್ತು ಎಬಿವಿಪಿಯ ದುಷ್ಕೃತ್ಯವನ್ನು ಶಿಕ್ಷಣ ಸಚಿವರು ಮರೆಮಾಚುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರವನ್ನು ಸ್ಥಳೀಯ ಮಟ್ಟದಲ್ಲಿ ಮುಗಿಸದೆ ಅಲ್ಲಿನ ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹಬ್ಬುವಂತ ಮಾಡಿರುವುದಲ್ಲದೆ, ನಿನ್ನೆ (ಫೆ.8ರಂದು) ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ ನಡೆಯುವಾಗ ರಾಜ್ಯವಾದ್ಯಂತ ಏಕಕಾಲದಲ್ಲಿ ಕೇಸರಿ ಶಾಲು ಮತ್ತು ಪೇಟ ಧರಿಸಿಕೊಂಡು ಜೈ ಶ್ರೀರಾಮ್ ಘೋಷಣೆಯೊಂದಿಗೆ ಗಲಭೆ ನಡೆಸಿರುವುದರ ಹಿಂದೆ ಎಬಿಪಿಪಿ ಮತ್ತು ಸಂಘಪರಿವಾರದ ಮುಖಂಡನ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಎಬಿವಿಪಿ ಮತ್ತು ಸಂಘಪರಿವಾರ ರಾದ್ಧಾಂತದಿಂದ ಹಲವೆಡೆ ಹಿಂಸಾಚಾರ ಪ್ರಕರಣ ನಡೆದಿದ್ದರೂ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಚಿವರಾದ ನಾಗೇಶ್ರವರು ಕ್ಯಾಂಪಸ್ ಪ್ರಂಟ್ ಮೇಲೆ ನಿರಾಧಾರ ಆರೋಪ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರದಲ್ಲಿ ಕ್ಯಾಂಪಸ್ ಫ್ರೆಂಟ್ ಯಾವತ್ತಿಗೂ ಮುಂಚೂಣಿಯಲ್ಲಿ ನಿಂತು ಸಂವಿಧಾನಕ್ಕೆ ಬದ್ಧವಾಗಿ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕುಗಳ ಪರವಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.