ಮಂಗಳೂರು, ಡಿ 11(SM): ನಗರದಲ್ಲಿ LSD ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರು ನಿವಾಸಿ ಗೌತಮ್ ಯಾನೆ ಗೌತು(28) ಹಾಗೂ ಲಾಯ್ ವೇಗಸ್(26) ಬಂಧಿತ ಆರೋಪಿಗಳು.
ಆರೋಪಿಗಳ ವಶದಿಂದ ಸುಮಾರು 13,000 ರೂಪಾಯಿ ಮೌಲ್ಯದ LSD ಎಂಬ ಮಾದಕ ವಸ್ತುವನ್ನು ಹಾಗೂ ದರೋಡೆ ಮಾಡಿದ ಮೊಬೈಲ್, ಸ್ಕೂಟರ್, ನಗದು ಹಣ ಮತ್ತು ದರೋಡೆ ಕೃತ್ಯಕ್ಕೆ ಬಳಸಿದ ಕಾರು, ಚೂರಿ, ಕಬ್ಬಿಣದ ರಾಡ್ ಸೇರಿದಂತೆ ಒಟ್ಟು 2,89,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಯಶಸ್ವಿಯಾಗಿರುತ್ತಾರೆ.
ನಗರದ ಹೆರಿಟೇಜ್ ಕಟ್ಟಡದ ಎದುರಿನ ರಸ್ತೆ ಬದಿಯಲ್ಲಿ ಆರೋಪಿಗಳು LSD ಎಂಬ ಮಾದಕ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡಲು ವಶದಲ್ಲಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಗೌತಮ್ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಪ್ರಕರಣ ದಾಖಲಾಗಿದ್ದು ಈತನ ಮೇಲೆ ದಾಖಲಾದ ಕೊಲೆ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಸ್ತುತ ಈತ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದ.