ಉಡುಪಿ, ಡಿ 11(SM): ಜಿಲ್ಲೆಯಲ್ಲಿ ಮರಳು ದಿಬ್ಬ ತೆರವು ಕುರಿತಂತೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಕೂಡ ಡಿಸೆಂಬರ್ 17ರ ಒಳಗೆ ಮರಳು ತೆಗೆಯುವುದನ್ನು ಪ್ರಾರಂಭಿಸಿ, ಸಾರ್ವಜನಿಕರಿಗೆ ಮರಳು ವಿತರಿಸಬೇಕು. ಇಲ್ಲವಾದಲ್ಲಿ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕುರಿತಂತೆ ಪರವಾನಗಿ ಕೋರಿರುವ 45 ಮಂದಿ ಪರವಾನಗಿದಾರರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರಿಗೆ ಮರಳು ದೊರೆಯದಂತಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳಲ್ಲಿನ ಮರಳನ್ನು ತೆಗೆದು ವಿತರಿಸುವ ಕುರಿತಂತೆ ಪರವಾನಗಿ ಕೋರಿರುವ 45 ಮಂದಿಯಲ್ಲಿ, 11 ಮಂದಿಗೆ ಪರವಾನಗಿ ನೀಡಲಾಗಿದೆ, 26 ಮಂದಿ ರಾಜಧನ ಪಾವತಿಸಿದ್ದಾರೆ. 8 ಮಂದಿ ರಾಜಧನ ಪಾವತಿಸಲು ಬಾಕಿ ಇದೆ ಎಂದ ಜಿಲ್ಲಾಧಿಕಾರಿಗಳು, ಪರವಾನಗಿ ಪಡೆದಿರುವ 11 ಮಂದಿ ಸಹ ಇದುವರೆಗೂ ಮರಳು ತೆಗೆಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪರವಾನಿಗ ಕೋರಿರುವ ಎಲ್ಲಾ 45 ಮಂದಿ ಸಹ ಎಲ್ಲಾ ಅಗತ್ಯ ದಾಖಲಾತಿಗಳನ್ನು ಪೂರ್ಣಗೊಳಿಸಿ, ಯಾವುದೇ ಅನಗತ್ಯ ಕಾರಣ ನೀಡದೆ ಡಿಸೆಂಬರ್ 17ರ ಒಳಗೆ ಮರಳುಗಾರಿಕೆ ಆರಂಭಿಸಿ ಸಾರ್ವಜನಿಕರಿಗೆ ಮರಳು ವಿತರಿಸಬೇಕು ಎಂದು ಸೂಚಿಸಿದರು.
ಪರವಾನಗೆಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಅವರು ಕೇಳಿದ ಪ್ರದೇಶದಲ್ಲೇ ಮರಳು ತೆಗೆಯಲು ಪರವಾನಗಿ ನೀಡಲಾಗಿದೆ, ಆದರೂ ಸಹ ಇನ್ನೂ ಮರಳು ತೆಗೆದು , ವಿತರಿಸುವ ಕೆಲಸ ನಡೆಯುತ್ತಿಲ್ಲ, ಪರವಾನಗಿದಾರರಿಗೆ ಮರಳುಗಾರಿಕೆ ಆರಂಭಿಸುವ ಕುರಿತು ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು.