ಬಳ್ಳಾರಿ, ಡಿ 12(MSP): ಮನೆ ಅಂಗಳದಲ್ಲಿ ಆಟವಾಡುತ್ತಿದ್ದ, ಮೂರು ವರ್ಷದ ಬಾಲಕನ ಮೇಲೆ ಎರಗಿದ ಚಿರತೆಯೊಂದು ಆತನನ್ನು ಎಳೆದೊಯ್ದು ಕೊಂದು ಹಾಕಿದ ಹೃದಯವಿದ್ರಾವಕ ಘಟನೆ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ.
ಸೋಮಲಾಪುರದ ಬುಡ್ಗ ಜಂಗಮ ಸಮುದಾಯದಕ್ಕೆ ಸೇರಿದ ಅಶ್ವ ರಾಘವೇಂದ್ರ ಹಾಗೂ ಮಮತಾ ದಂಪತಿಗಳ ಮೂರು ವರ್ಷದ ಪುತ್ರ ವೆಂಕಟಸ್ವಾಮಿ ಡಿ.11ರ ಮಂಗಳವಾರ ಸಂಜೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಬಂದ ಚಿರತೆ ಆತನನ್ನು ಹೊತ್ತುಕೊಂಡು ಹೋಯಿತು ಎಂದು ಸ್ಥಳೀಯರು ವಿವರಿಸಿದ್ದಾರೆ. ತಕ್ಷಣ ಬಾಲಕನ ತಾಯಿ ಹಾಗೂ ಗ್ರಾಮಸ್ಥರು ಬೆನ್ನಟ್ಟಿ ಹೋಗಿದ್ದಾರೆ ಆದರೆ ಮುಳ್ಳಿನ ಪೊದೆಯಲ್ಲಿ ಸುಮಾರು ಅರ್ಧ ತಾಸು ಹುಡುಕಾಡಿದ ನಂತರ ಬಾಲಕನ ಶವ ಪತ್ತೆಯಾಯಿತು’ ಎಂದು ಪ್ರತ್ಯಕ್ಷದರ್ಶಿ ಎಸ್.ಕೆ.ಬಸವರಾಜ ತಿಳಿಸಿದರು.
ಎರಡು ತಿಂಗಳ ಹಿಂದೆ ಗ್ರಾಮದ ಕುರಿ ಹಟ್ಟಿ ಮೇಲೆ ದಾಳಿ ನಡೆಸಿದ್ದ ಚಿರತೆ, ಎಂಟು ಕುರಿ ಮರಿಗಳನ್ನು ಕೊಂದು ಹಾಕಿತ್ತು.