ಬೆಂಗಳೂರು, ಡಿ 12(SM): ಡಿ. 9ರಂದು ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಉಂಟಾದ ಎಳೆದಾಟ ತಲ್ಲಾಟ ಹಾಗೂ ವಾಗ್ವಾದದ ಬಗ್ಗೆ ಶಾಸಕ ರಾಜೇಶ್ ನಾಯಕ್ ಸದನದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸರಕಾರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರ ಮುಂದೆ ತನ್ನನ್ನು ತಳ್ಳಲಾಗಿದೆ. ಸಚಿವರು ತಡೆಯುವ ಯತ್ನ ನಡೆಸಿದ್ದಾರೆ. ಆದರೆ ಕೆಲವೊಂದು ಗೂಂಡಗಳು ತನ್ನನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಇತಂಹ ಕೃತ್ಯಗಳನ್ನು ನಡೆಸಿದ್ದಾರೆ. ಗೂಂಡಾಗಳ ವಿರುದ್ಧ ಎಫ್ ಐ ಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಖಾದರ್, ಇಂತಹ ಘಟನೆ ನಡೆದಿರುವುದು ಸತ್ಯ. ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ೨ ಗುಂಪುಗಳ ನಡುವೆ ಘೋಷಣೆಗಳು ಬಂದಿವೆ. ಇದರಿಂದ ಶಾಸಕರಿಗೆ ಬೇಸರವುಂಟಾಗಿ ಕಾರ್ಯಕ್ರಮದಿಂದ ಅವರು ನಿರ್ಗಮಿಸಿದ್ದಾರೆ. ಬಳಿಕ ನಾನು ಶಾಸಕರನ್ನು ಸಮಾಧಾನ ಪಡಿಸಿದ್ದೇನೆ. ಮುಂದೆ ಇಂತಹ ಘಟನೆಗಳು ಮರು ಕಳಿಸದಂತೆ ಎಚ್ಚರ ವಹಿಸುತ್ತೇವೆ. ಸಣ್ಣ ವಿಚಾರವನ್ನು ದೊಡ್ಡದಾಗಿಸುವುದು ಬೇಡ ಎಂದು ನಾನೇ ಹೇಳಿದ್ದೇ ಎಂದು ಸಚಿವರು ಹೇಳಿದಾಗ ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ರಮೇಶ್ ಕುಮಾರ್, ಬಂಟ್ವಾಳದಲ್ಲಿ ನಡೆದಂತಹ ಘಟನೆ ಸಣ್ಣ ವಿಚಾರವಲ್ಲ. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಸಾರ್ವಜನಿಕ ಸರಕಾರಿ ಕಾರ್ಯಕ್ರಮಗಳ ಸಂದರ್ಭ ಅಲ್ಲಿನ ಸ್ಥಳೀಯ ಚುಣಾಯಿತ ಪ್ರತಿನಿಧಿ ಅಧ್ಯಕ್ಷತೆಯನ್ನು ವಹಿಸುವುದು ಮತ್ತು ಸೂಕ್ತವಾದಂತಹ ಪೊಲೀಸ್ ಭದ್ರತೆಯನ್ನು ಒದಗಿಸುವುದು ಸರಕಾರದ ಕರ್ತವ್ಯ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಮುಂದೆ ಇಂತಹ ಘಟನೆಗಳು ಮರು ಕಲಿಸಿದ್ದಲ್ಲಿ, ಕಾನೂನು ಕ್ರಮ ಕೈಗೊಳ್ಳ ಬೇಕಾದಿತು ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಸಿದ್ದಾರೆ.