ಕುಂದಾಪುರ,ಡಿ 13(MSP): ಕರ್ನಾಟಕದಿಂದ ಸರಬರಾಜು ಆದ ಮೀನಿಗೆ ಮತ್ತೆ ಗೋವಾ ಅಧಿಕಾರಿಗಳು ತಕರಾರು ತೆಗೆದಿದ್ದಾರೆ. ಹೀಗಾಗಿ ಗೋವಾ ಹಾಗೂ ಕರ್ನಾಟಕದ ಮೀನುಗಾರರ ನಡುವಿನ ಗೊಂದಲ ಮುಗಿಯುವ ಸಮಸ್ಯೆಯಂತೆ ಕಾಣುತ್ತಿಲ್ಲ.
ಸಾಂದರ್ಭಿಕ ಚಿತ್ರ
ಭಾನುವಾರದಂದು ಗೋವಾ ಗಡಿ ಅನುಮತಿ ಪಡೆಯದೆ ಕಾರವಾರದಿಂದ ತೆರಳಿದ ಮೀನಿನ ವಾಹನವನ್ನು, ತಡೆಹಿಡಿದ ಗೋವಾ ಅಧಿಕಾರಿಗಳು ಸುಮಾರು 10 ಲಕ್ಷ ಮೌಲ್ಯದ ಮೀನನ್ನು ಕಸದ ತೊಟ್ಟಿಗೆ ಎಸೆದು ಉದ್ಧಟನ ಮೆರೆದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಮತ್ತೆ ಗೋವಾಕ್ಕೆ ರಾಜ್ಯದ ಮೀನು ಸಾಗಾಟಕ್ಕೆ ತಡೆಯುಂಟಾಗಿದೆ.
ಕಾರವಾರದ ರಾಮಣ್ಣ ಅವರಿಗೆ ಸೇರಿದ ಮೀನುಗಳನ್ನು ಎಫ್ ಡಿ ಎ ಪರವಾನಿಗೆ ಪಡೆದು, ಇನ್ಸುಲೇಟರ್ ವಾಹನದಲ್ಲಿ ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್ ಕಂಪನಿಗೆ ತೆಗೆದುಕೊಂಡು ಹೋಗುವ ಸಂದರ್ಭ ಗಡಿ ಭಾಗದಲ್ಲಿ ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಬಳಿಕ ಎರಡು ದಿನ ಇಟ್ಟು ಫಾರ್ಮಾಲಿನ್ ಇದೆಯಾ ಎಂದು ಪರೀಕ್ಷಿಸಿದ್ದಾರೆ. ಈ ಅಂಶ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಪಣಜಿಯ ನಗರಸಭೆಯ ಕಸದ ತೊಟ್ಟಿಗೆ ೧೦ ಲಕ್ಷದ ಮೌಲ್ಯದ ಮೀನನ್ನು ಎಸೆದಿದ್ದಾರೆ.
ಮೀನು ಕೊಂಡು ಹೋದ ರಾಮಣ್ಣ ಎಂಬವರು, ನೀವು ಬೇಡವೆಂದರೆ ತೊಂದರೆ ಇಲ್ಲ, ನಾನು ನಮ್ಮ ಮೀನುಗಳನ್ನು ರಾಜ್ಯಕ್ಕೆ ವಾಪಾಸ್ ತೆಗೆದುಕೊಂಡು ಹೋಗುತ್ತೇವೆ ಎಂದು ಪರಿಪರಿಯಾಗಿ ಬೇಡಿಯಾದರೂ, ನಮಗೆ ಆರೋಗ್ಯ ಸಚಿವರಿಂದ ಆದೇಶ ಬಂದಿದೆ ಎಂದು ಚಾಲಕನ ಕೈಯಲ್ಲೇ ಮಣ್ಣು ಮಾಡಿಸಿದ್ದಾರೆ ಎಂದು ಗೋಳು ತೋಡಿಕೊಳ್ಳುತ್ತಾರೆ.
ಮಹಾರಾಷ್ಟ್ರ , ಆಂದ್ರಪ್ರದೇಶದ ಮೀನಿನ ವಾಹನಗಳಿಗೆ ತೊಂದರೆ ಮಾಡದ ಗೋವಾ ಕರ್ನಾಟಕದ ಮೀನಿನ ವಾಹನ ಬಂದರೆ ಮಾತ್ರ ತಡೆಹಿಡಿದು ವಿಚಾರಿಸಿ ಮಲತಾಯಿ ದೋರಣೆ ಮಾಡುತ್ತಿದೆ. ರಾಜ್ಯ ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರು ಆರೋಪಿಸಿದ್ದಾರೆ.