ನವದೆಹಲಿ,ಡಿ 14 (MSP): ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆಯನ್ನು ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಸಬೇಕು ಎಂದು ಕೋರಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಇದರಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಾಳಗೊಂಡಂತಾಗಿದೆ. ನವೆಂಬರ್ 14ರಂದು ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ತೀರ್ಪು ಕಾಯ್ದಿರಿಸಿದ್ದರು.
ಯುದ್ದ ವಿಮಾನ ಖರೀದಿ ಒಡಂಬಡಿಕೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್. ಶರ್ಮಾ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ವಿನೀತ್ ಧಂಡಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಎಎಪಿ ಮುಖಂಡ ಸಂಜಯ್ ಸಿಂಗ್ ಅವರೂ ಕೋರ್ಟ್ ನಿಗಾದಲ್ಲಿ ತನಿಖೆಗೆ ಆಗ್ರಹಿಸಿದ್ದರು. ಎಫ್ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕದ ತಟ್ಟಿದ್ದರು. ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಖರೀದಿ ದರವನ್ನು ಬಹಿರಂಗಗೊಳಿಸಲು ನಿರಾಕರಿಸಿತ್ತು.
ಶುಕ್ರವಾರ ತೀರ್ಪು ಪ್ರಕಟಿಸಿರುವ ಸುಪ್ರೀಂ, ವಿಮಾನ ಖರೀದಿ ಪ್ರಕ್ರಿಯೆಯು ನಮಗೆ ತೃಪ್ತಿಯನ್ನು ತಂದುಕೊಟ್ಟಿದ್ದು, ಒಪ್ಪಂದದ ಕುರಿತು ಯಾವುದೇ ರೀತಿಯ ಸಂಶಯಗಳು ಮೂಡುತ್ತಿಲ್ಲ. ಮತ್ತು 126 ಯುದ್ದ ವಿಮಾನಗಳನ್ನು ಮಾತ್ರ ಖರೀದಿಸಿ ಎಂದು ಸರ್ಕಾರವನ್ನು ನ್ಯಾಯಾಲಯ ಬಲವಂತ ಮಾಡಲು ಸಾಧ್ಯವಿಲ್ಲ. ಜತೆಗೆ ಬೆಲೆ ಹೋಲಿಕೆ ಮಾಡುವ ಕೆಲಸ ಕೋರ್ಟ್ ನದ್ದು ಅಲ್ಲ ಎಂದು ಹೇಳಿ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ.