ಕಾಸರಗೋಡು,ಡಿ 14 (MSP): ಶಬರಿಮಲೆಯಲ್ಲಿ ನಿಷೇಧಾಜ್ಞೆ ವಾಪಸ್ಗೆ ಆಗ್ರಹಿಸಿ ಕೇರಳ ವಿಧಾನಸಭೆ ಎದುರು ಬಿಜೆಪಿ ನಡೆಸುತ್ತಿರುವ ಸತ್ಯಾಗ್ರಹದ ಸ್ಥಳದಲ್ಲಿ ಅಯ್ಯಪ್ಪ ಭಕ್ತರೊಬ್ಬರು ಆತ್ಮಾ ಹುತಿ ಮಾಡಿಕೊಂಡಿದ್ದು ಈ ಘಟನೆಯನ್ನು ಖಂಡಿಸಿ ಬಿಜೆಪಿ ಕರೆ ನೀಡಿರುವ ಕೇರಳ ಬಂದ್ ಗೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಬಸ್ಸುಗಳು ಹೊರತುಪಡಿಸಿ ಉಳಿದಂತೆ ವಾಹನ ಸಂಚಾರ ಎಂದಿನಂತಿದೆ. ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದುಕೊಂಡಿದೆ. ಖಾಸಗಿ, ಕೆ ಎಸ್ ಆರ್ ಟಿ ಸಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸುವುದರಿಂದ ಸಾಮಾನ್ಯ ಜನರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸಮಸ್ಯೆಗೆ ತುತ್ತಾಗಿದ್ದಾರೆ. ಇಂದು ನಡೆಯಬೇಕಿದ್ದ ಶಾಲಾ ಮಧ್ಯಾವಧಿ ಪರೀಕ್ಷೆಯನ್ನು ಡಿ. 21 ಕ್ಕೆ ಮುಂದೂಡಲಾಗಿದೆ.
ಶಾಲೆಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸುತ್ತಿದೆ. ಬಸ್ಸುಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಸರಕಾರಿ ನೌಕರರ ಸಂಖ್ಯೆ ವಿರಳವಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.
ಕೇರಳ ವಿಧಾನಸಭೆ ಎದುರು ಬಿಜೆಪಿ ನಡೆಸುತ್ತಿದ್ದ ಸತ್ಯಾಗ್ರಹದ ಸ್ಥಳದಲ್ಲಿ ಅಯ್ಯಪ್ಪ ಭಕ್ತರಾದ ವೇಣುಗೋಪಾಲನ್ ನಾಯರ್ (55)ಇವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳದಲ್ಲೇ ಇದ್ದ ಪೊಲೀಸರು, ಬಿಜೆಪಿ ಕಾರ್ಯಕರ್ತರು ಬೆಂಕಿ ನಂದಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು ಎಂದು ವರದಿಯಾಗಿತ್ತು.