ಕರಾವಳಿ, ಡಿ 14(SM): ರಾಜ್ಯ ವಿಧಾನ ಪರಿಷತ್ನಲ್ಲಿ ಇದೀಗ ಕರಾವಳಿಗರದ್ದೇ ಪಾರಮ್ಯ. ಆಡಳಿತ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನವನ್ನು ಕರಾವಳಿ ನಾಯಕರೇ ಅಲಂಕರಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಸಭಾಪತಿ ಸ್ಥಾನವೂ ಕರಾವಳಿಗೆ ಲಭ್ಯವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಮಂಗಳೂರು ಮೂಲದ ಚಿತ್ರ ನಟಿ ಜಯಮಾಲಾ ಅವರು ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅವರು ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷ ನಾಯಕಿ ಸ್ಥಾನ ಪಡೆದುಕೊಂಡಿದ್ದಾರೆ. ಬಳಿಕ ಖಾಲಿ ಇರುವ ಪ್ರತಿಪಕ್ಷದ ನಾಯಕ ಸ್ಥಾನ ಕೂಡಾ ಕರಾವಳಿ ಪಾಲಾಗಿತ್ತು. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಪಡೆದುಕೊಂಡಿದ್ದರು.
ಇದೀಗ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಹೊಂದಿರುವ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನವೂ ಕರಾವಳಿ ನಾಯಕರ ಕೈ ಸೇರಿದೆ. ವಿಧಾನ ಪರಿಷತ್ ಸ್ಪೀಕರ್ ಸ್ಥಾನವೂ ಕರಾವಳಿ ಜಿಲ್ಲೆಯ ಕುಂದಾಪುರಕ್ಕೆ ಒಲಿದಿದೆ. ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.