ಮಂಗಳೂರು, ಅ 19: ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಟೋಬರ್ 22 ರಂದು ಬಂಟ್ವಾಳಕ್ಕೆ ಆಗಮಿಸಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ತಿಳಿಸಿದ್ದಾರೆ. ನಗರದಲ್ಲಿ ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರ ಜತೆಗೆ ಈಗಾಗಲೇ ಪೂರ್ಣಗೊಂಡಿರುವ ಒಟ್ಟು ರೂ. 148.29 ಕೋಟಿಯ ಯೋಜನೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ 104.21 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವರು. ಇದರಲ್ಲಿ ಪ್ರಮುಖವಾಗಿ ಮಿನಿ ವಿಧಾನ ಸೌಧ, ನಿರೀಕ್ಷಣಾ ಮಂದಿರ ಕಟ್ಟಡ, ನೂತನ ಮೆಸ್ಕಾಂ ಕಟ್ಟಡ , ಟ್ರೀಪಾರ್ಕ್ ಉದ್ಘಾಟನೆಯನ್ನು ಒಳಗೊಂಡಿದೆ. ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಸುಧೀರ್ ರೆಡ್ಡಿ , ಜಿಲ್ಲಾ ಪಂಚಾಯತ್ ಸಿಇಓ ರವಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.