ಬೆಳಗಾವಿ, ಡಿ 14(SM): ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕೊಳೆ ರೋಗದಿಂದ ನಷ್ಟವಾಗಿರುವ ಅಡಿಕೆ ಬೆಳೆಗೆ ಪರಿಹಾರ ಕುರಿತಂತೆ ಸಭೆ ನಡೆಸಲು ಸರಕಾರಕ್ಕೆ ಸೂಚನೆ ನೀಡಲಾಗಿದೆ. ಶುಕ್ರವಾರ ನಡೆದ ರಾಜ್ಯ ವಿಧಾನಸಭೆಯಲ್ಲಿ ಸಭಾಧ್ಯಕ್ಷ ಕೆ ಆರ್ ರಮೇಶ್ಕುಮಾರ್ ಸರಕಾರಕ್ಕೆ ಈ ಸಲಹೆಯನ್ನು ನೀಡಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರು ಉತ್ತರಿಸುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ವಿವಿಧ ಸದಸ್ಯರು ಸಭೆಯ ಗಮನಕ್ಕೆ ತಂದರು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕರಾದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ಮುಂದಿನ ವಾರ ತಮ್ಮ ಕೊಠಡಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಮುಂದಾಗೋಣ ಎಂದು ಚರ್ಚೆಗೆ ತೆರೆ ಎಳೆದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳೆ ರೋಗದಿಂದ ಅಡಿಕೆ ಬೆಳೆ ಹಾನಿ ವಿವರ ಹಾಗೂ ಸರ್ಕಾರದ ಪರಿಹಾರ ಕ್ರಮಗಳ ಕುರಿತಂತೆ ತೋಟಗಾರಿಕಾ ಸಚಿವರು ವಿವರಿಸಿದರು. 2018-19ನೇ ಸಾಲಿನಲ್ಲಿ ಅತಿವೃಷ್ಟಿಯಿಂದ 33,595 ಹೆಕ್ಟೇರ್ ಪ್ರದೇಶದ ಅಡಿಕೆ ಬೆಳೆಗೆ ಕೊಳೆ ರೋಗ ವ್ಯಾಪಿಸಿದೆ. ಇದರಿಂದ 252 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.