ಉಡುಪಿ, ಡಿ15(SS): ಮುಂದಿನ 2020ರ ಜನವರಿಯಿಂದ 2 ವರ್ಷ ಶ್ರೀಕೃಷ್ಣನ ಪೂಜಾಧಿಕಾರಕ್ಕೆ ಅದಮಾರು ಮಠ ಸಿದ್ಧತೆ ಮಾಡಿಕೊಂಡಿದ್ದು, ಪರ್ಯಾಯಕ್ಕೆ ಪೂರ್ವಭಾವಿಯಾಗಿ ಬಾಳೆ ಮುಹೂರ್ತ ನಡೆದಿದೆ.
ಈ ವೇಳೆ ಸಂಪ್ರದಾಯದಂತೆ ನೂರಾರು ಬಾಳೆಗಿಡಗಳಿಗೆ ಪೂಜೆ ನೆರವೇರಿಸಿ, ತೋಟದಲ್ಲಿ ಗಿಡ ನೆಡಲಾಗಿದೆ. ಶ್ರೀಕೃಷ್ಣ ಮಠದಲ್ಲಿ ಈಗ ಪಲಿಮಾರು ಮಠದ ಪರ್ಯಾಯ ನಡೆಯುತ್ತಿದೆ. ಮುಂದಿನ 2020ರ ಜನವರಿಯಿಂದ ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಬಾಳೆ ಮುಹೂರ್ತ ನೆರವೇರಿದೆ.
ಕೃಷ್ಣ ಮಠ- ಅನಂತೇಶ್ವರ- ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ಬಾಳೆ ಗಿಡಗಳಿಗೆ ಪೂಜೆ ಸಲ್ಲಿಸಿ ನಂತರ ಮಠದ ತೋಟದಲ್ಲಿ ಬಾಳೆಗಿಡವನ್ನು ನೆಡಲಾಗಿದೆ. ಬಾಳೆಗಿಡ ಫಲ ಬಿಡುವ ಸಂದರ್ಭ ಅದಮಾರು ಮಠದ ಪರ್ಯಾಯ ಪೀಠದಲ್ಲಿ ಇರಲಿದ್ದಾರೆ.
ಈ ವೇಳೆ ಹಿರಿಯ ಶ್ರೀಗಳು ಮಾತನಾಡಿ, ಬಾಳೆ ಮುಹೂರ್ತ ನೆರವೇರಿದ್ದು ಮುಂದೆ ಭತ್ತ, ಅಕ್ಕಿ, ಕಟ್ಟಿಗೆ ಮತ್ತು ಚಪ್ಪರ ಮುಹೂರ್ತಗಳು ನೆರವೇರಲಿದೆ. ಅದಮಾರು ಪರ್ಯಾಯ ಸಂದರ್ಭ ಭಕ್ತರು 2 ವರ್ಷ ಮಠಕ್ಕೆ ಬಂದು ನೆಮ್ಮದಿಯಿಂದ ದೇವರನ್ನು ಕಂಡುಕೊಳ್ಳುವ ಬಗ್ಗೆ ಈ ಬಾರಿ ಚಿಂತಿಸುವುದಾಗಿ ಮಠ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಪರ್ಯಾಯ ಪೀಠದಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಸದ್ಯ ಗೌಪ್ಯವಾಗಿತ್ತು. ಇದೇ ಕುತೂಹಲವನ್ನು ಜನ ಮತ್ತು ಮಾಧ್ಯಮ 2020ರವರೆಗೂ ಉಳಿಸಿಕೊಳ್ಳಿ. ಪೀಠ ಏರುವ ಮುಹೂರ್ತದಲ್ಲೇ ಇದು ನಿರ್ಧಾರ ಆಗಲಿದೆ ಎಂದು ತಿಳಿಸಿದರು.