ಉಡುಪಿ ಡಿ 15(SM): ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ, ಕಟಪಾಡಿ ಹಾಗೂ ಸಂತೆಕಟ್ಟೆ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಅವರು ಶುಕ್ರವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳನ್ನು ಆಲಿಸಿ ಮಾತನಾಡಿದರು. ರಾ.ಹೆ. 66ರ ಈ ಮೂರು ಜಂಕ್ಷನ್ ಗಳಲ್ಲಿ ತುಂಬಾ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ದ್ವಿಪಥ ಇಲ್ಲದಿರುವುದರಿಂದ ಟ್ರಾಫಿಕ್ ದಟ್ಟನೆಯನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತಿದೆ. ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬರುತ್ತಿವೆ. ಹಾಗಾಗಿ ರಾ.ಹೆ.ಗಳಲ್ಲಿ ವಿಶೇಷ ಮನವಿಯ ಮೇರೆಗೆ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲು ಅವಕಾಶ ಇದೆ ಎಂದರು.
ಉಡುಪಿ ನಗರಸಭೆಯ ಎದುರಿನ ಮುಖ್ಯ ರಸ್ತೆಯಲ್ಲಿಯೇ ಆಟೋ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಇರುವ ಸಾರ್ವಜನಿಕರ ವಾಹನ ನಿಲುಗಡೆಯ ಸ್ಥಳದಲ್ಲಿ ಸ್ಥಳೀಯ ಟೂರಿಸ್ಟ್ ವಾಹನಗಳನ್ನು ನಿಲ್ಲಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ದೂರು ನೀಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.