ಕಾಸರಗೋಡು, ಡಿ15: ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆ ಮಾಡಬೇಕು ಎಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.
ಕೇವಲ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಕಾಸರಗೋಡು ಜಿಲ್ಲೆ ಸೇರಿದಂತೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಅಸಂಖ್ಯಾತ ಮಂದಿ ತುಳುವರಿದ್ದಾರೆ. ಸುಮಾರು 75 ಲಕ್ಷ ಮಂದಿ ತುಳು ಭಾಷೆ ಮಾತನಾಡುತ್ತಾರೆ. ಹೀಗಾಗಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನೇಕ ವರುಷಗಳ ಹಿಂದೆ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ವಲಯದಲ್ಲಿ ಸಂಪನ್ನವಾಗಿದ್ದ ತುಳು ಭಾಷೆ ಇದೀಗ ಬೇರೆ ಭಾಷೆಗಳ ಪ್ರಭಾವಕ್ಕೆ ಸಿಲುಕಿದ್ದು, ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ. 2006ರ ಜನಗಣತಿಯಂತೆ 18 ಲಕ್ಷ ಹಾಗೂ 2011ರ ಗಣತಿಯಂತೆ 19 ಲಕ್ಷ ತುಳು ಭಾಷಿಕರಿದ್ದಾರೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ಹಾಗಾಗಿ ತುಳುಭಾಷೆಗೆ ಸಂವಿಧಾನವಾಗಿ ಪ್ರಾಧನ್ಯತೆ ಸಿಗಬೇಕು ಎಂದು ಹೇಳಿದ್ದಾರೆ.