ಉಡುಪಿ, ಡಿ15(SS): ಮನುಷ್ಯನ ಹಸಿವು ಮತ್ತು ನೋವುಗಳಿಗೆ ಮೊದಲು ಸ್ಪಂದಿಸಬೇಕು. ಹಸಿವು ಮತ್ತು ನೋವುಗಳಿಗೆ ಸ್ಪಂದಿಸುವುದು ನಿಜವಾದ ಧಾರ್ಮಿಕತೆ ಎಂದು ಕೇಮಾರು ಸಾಂದೀಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಉಡುಪಿಯ ಪುರಭವನದಲ್ಲಿ ಶುಕ್ರವಾರ ನಡೆದ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನಾವು ಮಾನವೀಯತೆ ಇಲ್ಲದ ಯಾಂತ್ರೀಕೃತ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಈ ಮಧ್ಯೆ ನಾವು ಇನ್ನೊಬ್ಬರ ಹಸಿವು ಹಾಗೂ ನೋವುಗಳಿಗೆ ಸ್ಪಂದಿಸಬೇಕಾಗಿದೆ. ಇದುವೇ ನಿಜವಾದ ಧಾರ್ಮಿಕತೆ ಎಂದು ಹೇಳಿದ್ದಾರೆ.
ಮನುಷ್ಯನಲ್ಲಿ ಕೇವಲ ದೇವಸ್ಥಾನ, ಮಸೀದಿ, ಚರ್ಚ್ಗೆ ಹೋದಾಗ ಮಾತ್ರ ಧಾರ್ಮಿಕತೆ ಬರುವುದಿಲ್ಲ. ಬದಲಾಗಿ ಧಾರ್ಮಿಕ ಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಮಾತ್ರವಲ್ಲ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಗ್ರಂಥಗಳಿಗೆ ನಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ಸೇರಿಸುವುದರಿಂದ ಇಂದು ಸಮಾಜದಲ್ಲಿ ಸಂಘರ್ಷದ ವಾತಾವರಣ ಸೃಷ್ಠಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.