ಮಂಗಳೂರು, ಡಿ15(SS):ನಗರದಲ್ಲಿ ಅತೀ ದುಬಾರಿ ಎಲ್ ಎಸ್ ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾವೂರು ನಿವಾಸಿ ಗೌತಮ್ (28), ಮತ್ತು ದೇರೆಬೈಲ್ ಕೊಂಚಾಡಿ ನಿವಾಸಿ ಲಾಯ್ ವೇಗಸ್ (26) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಹೆರಿಟೇಜ್ ಕಟ್ಟಡದ ಎದುರಿನ ರಸ್ತೆ ಬದಿಯಲ್ಲಿ ಆರೋಪಿಗಳು ಎಲ್ ಎಸ್ ಡಿ ಮಾದಕ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗೌತಮ್ ,ಲಾಯಿ ವೇಗಸ್ ರವರು ಇತರರೊಂದಿಗೆ ಸೇರಿಕೊಂಡು ದಿನಾಂಕ ಡಿಸೆಂಬರ್ 5 ರಂದು ನಗರದ ಫಳ್ನೀರ್ ನಿಂದ ವಿದ್ಯಾರ್ಥಿ ಹಸನ್ ಶಿಮಾಕ್ ಎಂಬವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಗೌತಮ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ 1ಹಲ್ಲೆ, 1ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಲಾಯ್ ವೇಗಸ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ 2 ದರೋಡೆ ಯತ್ನ ಪ್ರಕರಣ, ಉತ್ತರ ಪೊಲೀಸ್ ಠಾಣೆಯಲ್ಲಿ 1 ದರೋಡೆ ಯತ್ನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 1, ಕೊಲೆ ಯತ್ನ, 2 ಹಲ್ಲೆ ಪ್ರಕರಣ. ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.
ಬಂಧಿತರಿಂದ 13 ಸಾವಿರ ರೂಪಾಯಿ ಮೌಲ್ಯದ 13 ಎಲ್ ಎಸ್ ಡಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ದರೋಡೆ ಮಾಡಿದ ಮೊಬೈಲ್ ಹ್ಯಾಂಡ್ ಸೆಟ್, ಸ್ಕೂಟರ್, ನಗದು ಹಣ ಮತ್ತು ದರೋಡೆ ಕೃತ್ಯಕ್ಕೆ ಬಳಸಿದ ಕಾರು, ಚೂರಿ, ಕಬ್ಬಿಣದ ರಾಡ್ ಸೇರಿದಂತೆ ಒಟ್ಟು 2.89 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.