ತಿರುವನಂತಪುರ, ಡಿ15(SS): ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರಿಂದ ಅಕ್ಟೋಬರ್ ತಿಂಗಳಿನಲ್ಲಿ ಅಯ್ಯಪ್ಪನ ದೇಗುಲದ ಪ್ರವೇಶಕ್ಕೆ ಮುಂದಾಗಿದ್ದು ಮಾತ್ರವಲ್ಲದೆ, ಶಬರಿಮಲೆ ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದಳು.
ಪೊಲೀಸರು ರೆಹನಾ ಫಾತಿಮಾಳನ್ನು ಕೇರಳ ಹೈಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುನಿಲ್ ಥಾಮಸ್, ಫಾತಿಮಾಳಿಗೆ ಷರತ್ತು ಬದ್ಧ ಜಾಮಿನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
50 ಸಾವಿರ ರೂ. ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಪಂಪಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ತೆರಳಬಾರದು ಮತ್ತು ದೇವಾಲಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ರೆಹನಾ ಫಾತಿಮಾಳ ಕೆಲವೊಂದು ಫೇಸ್ಬುಕ್ ಪೋಸ್ಟ್ಗಳು ಧಾರ್ಮಿಕ ಮನೋಭಾವನೆಗೆ ಧಕ್ಕೆಯುಂಟು ಮಾಡುವಂತಿದೆ ಎಂದು ಆರೋಪಿಸಿ ರಾಧಾಕೃಷ್ಣ ಮೆನನ್ ಎಂಬವರು ಪತ್ತನಂತಿಟ್ಟ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಫಾತಿಮಾ ಮೇಲೆ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಈಕೆಯನ್ನು ಬಂಧಿಸಿದ್ದರು.