ಬೆಳ್ತಂಗಡಿ, ಡಿ 16 (MSP): ಬೆಳ್ತಂಗಡಿ ಪ.ಪಂ.ಚುನಾವಣೆಯ ತರಬೇತಿ ಹಾಗೂ ಕರ್ತವ್ಯಕ್ಕೆ ಹಾಜರಾಗದೆ ತಹಶೀಲ್ದಾರ್ ಜತೆ ಅನುಚಿತ ವರ್ತಿಸಿದ್ದ ಮಡಂತ್ಯಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಶ್ ರನ್ನು ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಅಮಾನತುಗೊಳಿಸಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ಗೆ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಘೋಷಿಸಿದ ವೇಳಾಪಟ್ಟಿಯನ್ನು ಅನುಸರಿಸಿ ನಾಗೇಶ್ರವರಿಗೆ ಅಧ್ಯಕ್ಷಾಧಿಕಾರಿಯನ್ನಾಗಿ ಪ್ರಜಾಪ್ರಾತಿನಿದ್ಯ ಕಾಯ್ದೆ ಅನ್ವಯ ಬೆಳ್ತಂಗಡಿ ತಹಶಿಲ್ದಾರ್ ಮೂಲಕ ಆದೇಶ ಹೊರಡಿಸಲಾಗಿತ್ತು.
ಈ ಅದೇಶದ ಪ್ರಕಾರ ಅ.26ರಂದು ಎರಡನೇ ಹಂತದ ತರಬೇತಿಗೆ ಗೈರು ಹಾಜರಾಗಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ್ ಮೌಖಿಕ ಆದೇಶ ನೀಡಿದ್ದರು. ಇದನ್ನು ನಿರ್ಲಕ್ಷಿಸಿ ಉದ್ದಟತನದಿಂದ ವರ್ತಿಸಿದ್ದಲ್ಲದೆ ಅ.27ರಂದು ಮಸ್ಟರಿನ್ ಕರ್ತವ್ಯಕ್ಕೆ ಕೂಡ ಗೈರು ಹಾಜರಾಗಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ಅವರು, ತನ್ನೊಂದಿಗೆ ಪಿಡಿಓ ಅನುಚಿತವಾಗಿ ವರ್ತಿಸಿದ ಕುರಿತು ದ.ಕ.ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ವರದಿಯನ್ನು ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ಅಮಾನತಿಗಾಗಿ ಜಿ.ಪಂ.ಸಿಇಓಗೆ ಬರೆದಿದ್ದರು. ಅದರಂತೆ ಅವರು ಅಮಾನತುಗೊಳಿಸಿದ್ದಾರೆ.