ಪುತ್ತೂರು,ಡಿ 16 (MSP): ನಗರದ ಮುಖ್ಯ ರಸ್ತೆ ಬಸ್ ನಿಲ್ದಾಣ ಬಳಿ ಮೈದೆ ದೇವುಸ್ ಚರ್ಚ್ ಮುಂಭಾಗ ಶನಿವಾರ ಸಂಜೆ ವಿದ್ಯುತ್ ಕಂಬ ಹತ್ತಿ ಎಲ್ ಟಿ ಲೈನ್ ದುರಸ್ತಿ ನಡೆಸುತ್ತಿದ್ದ ಇಬ್ಬರು ಕಾರ್ಮಿಕರು ವಿದ್ಯುತ್ ಶಾಕ್ ತಗುಲಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ಗುತ್ತಿಗೆ ಸಂಸ್ಥೆ ಕಾರ್ಮಿಕರಾದ ನಂಜನಗೂಡು ತಾಲೂಕಿನ ಕಸಿವಿನಹಳ್ಳಿ ದೂರಳ್ಳಿ ಗ್ರಾಮದ ರವೊ (19) ಕಂಬದಿಂದ ಎಸೆಯಲ್ಪಟ್ಟಿದ್ದು ಮತ್ತೊಬ್ಬ ಕಾರ್ಮಿಕ ಬಸವನಾಯಕ್ (30) ಸುಮಾರು 10 ನಿಮಿಷ ಕಂಬದಲ್ಲೆ ಬಾಕಿಯಾಗಿದ್ದರು. ಇಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ಅಪಘಾತಕ್ಕೆ ಒಳಗಾಗಿ ಕಂಬದಲ್ಲಿ ಕುಳಿತಿದ್ದ ಸ್ಥಿತಿಯಲ್ಲಿ ಬಾಕಿಯಾಗಿದ್ದ ಬಸವನನಾಯಕ್ ಅವರನ್ನು ಉಳಿದ ಕಾರ್ಮಿಕರು ಕಂಬಕ್ಕೆ ಹತ್ತಿ ಹಗ್ಗದ ಸಹಾಯದಿಂದ ಇಳಿಸುವ ಪ್ರಯತ್ನ ನಡೆಸಿದರು. ಆದರೆ ಮೆಸ್ಕಾಂ ಸಿಬ್ಬಂದಿ ನೆರವು ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆಸ್ಕಾಂ ಸಿಬ್ಬಂದಿ ಕಂಬ ಹತ್ತಿ ಬಸವ ನಾಯಕ್ ಅವರನ್ನು ಇಳಿಸುವಲ್ಲಿ ಸಹಕರಿಸಿದರು.
ದುರಸ್ತಿ ಸಂದರ್ಭ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೂ ಕರೆಂಟ್ ರಿಟರ್ನ್ ಆಗಿದೆ. ಕಾರ್ಮಿಕರಿಬ್ಬರೂ ಚೇತರಿಸಿಕೊಂಡಿದ್ದಾರೆ ಎಂದು ಮೆಸ್ಕಾಂ ಪುತ್ತೂರು ಸಹಾಯ ಕಾರ್ಯನಿರ್ವಾಹಕ ಇಂಜಿನಿಯ ರಾಮಚಂದ್ರ ತಿಳಿಸಿದ್ದಾರೆ.