ಕುಂದಾಪುರ ಡಿ 16 (MSP): ಸ್ವಂತ ತಂದೆ ತಾಯಿಗಳಿದ್ದರೂ ಅವರಿಗೆ ಗೊತ್ತಿಲ್ಲದಂತೆಯೇ ಬಾಡಿಗೆ ಪೋಷಕರನ್ನು ಸೃಷ್ಟಿಸಿ ಅನಾಥೆ ಯುವತಿ ಎಂದು ಬಿಂಬಿಸಿ ಹೆಣ್ಣು ಸಿಗದೇ ಪರದಾಡುತ್ತಿರುವ ಯುವಕರನ್ನು ನಂಬಿಸಿ ಕಮಿಷನ್ ಪಡೆದು ಮದುವೆ ಮಾಡಿಕೊಡುವುದಲ್ಲದೇ ಮದುವೆಯಾಗಿ ಮೂರೇ ದಿನಕ್ಕೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಸಿ ಗಂಡನ ಮನೆಯಿಂದ ವಾಪಸು ಬಂದು ಬೇರೆ ಮದುವೆ ನಾಟಕವಾಡಿ ಹಣ ಸುಲಿಗೆ ಮಾಡುವ ಜಾಲವೊಂದು ಕುಂದಾಪುರ ತಾಲೂಕಿನಲ್ಲಿ ಸಕ್ರಿಯವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂತ್ರಸ್ಥ ಯುವಕನ ಮನೆಯವರು ಉಡುಪಿ ಜಿಲ್ಲಾ ಎಸ್ಪಿಗೆ ದೂರು ಕೊಟ್ಟಿದ್ದಾರಾದರೂ ಜಾಲವನ್ನು ಬೇಧಿಸಲು ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಮೂರ್ನಾಲ್ಕು ಕಡೆಯಲ್ಲಿ ತಂಡವೊಂದು ಇದೇ ರೀತಿ ಅಕ್ರಮ ಮದುವೆಯಾಗಿ ಗಂಡ ಕೊಟ್ಟ ಬಂಗಾರದ ಒಡವೆ ಹಾಗೂ ಸಾವಿರಾರು ರೂಪಾಯಿ ಬ್ರೋಕರ್ ಕಮಿಷನ್ ದೋಚಿ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಿಣ ಭಾಗದವರೆನ್ನಲಾದ ಈ ತಂಡದಲ್ಲಿ ನಾಲ್ಕು ಜನರಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆ ಹೇಗೆ? : ಇಲ್ಲಿ ಮದುವೆಯಾಗುವ ಯುವತಿಗೆ ನಿಜವಾದ ತಂದೆ ತಾಯಿ ಇದ್ದಾರೆ ಎನ್ನಲಾಗಿದೆ. ಆದರೆ ಅವರಿಗೆ ಮಗಳು ಈ ರೀತಿಯ ವಂಚನೆ ಮಾಡುತ್ತಿರುವುದು ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ಜಾಲ ತಂಡದಲ್ಲಿರುವ ಬ್ರೋಕರ್ ಒಬ್ಬ ಅಪ್ಪ ಅಮ್ಮ ಇಲ್ಲದ ಬೇರೊಂದು ಕುಟುಂಬ ಸಾಕಿದ ಅನಾಥೆ ಯುವತಿಯೊಬ್ಬಳಿದ್ದಾಳೆ ಅವಳನ್ನು ಮದುವೆಯಾಗುವಂತೆ ಹೆಣ್ಣು ಸಿಕ್ಕದ ಯುವಕರಿಗೆ ಫೋಟೋ ತೋರಿಸುತ್ತಾನೆ. ಇದಕ್ಕೆ ಒಪ್ಪುವ ಯುವಕರಿಂದ ಕಮಿಷನ್ ರೂಪದಲ್ಲಿ ಮದುವೆಗೆ ಮುಂಚೆಯೇ 80 ರಿಂದ 90 ಸಾವಿರ ರೂಪಾಯಿ ಕಮಿಷನ್ ಪಡೆಯಲಾಗುತ್ತದೆ. ತಂಡದಲ್ಲಿರುವ ಸಾಕು ತಂದೆ ಮತ್ತು ತಾಯಿಗಳಿಬ್ಬರ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗುವಂತೆಯೂ ಯುವತಿ ಬಡವಳಾಗಿದ್ದು, ಒಡವೆಗಳನ್ನು ಹಾಕುವಂತೆಯೂ ಬ್ರೋಕರ್ ಯುವಕನ ಮನೆಯವರಲ್ಲಿ ಹೇಳುತ್ತಾನೆ. ಹೆಣ್ಣು ಸಿಕ್ಕಿದ ಖುಷಿಯಲ್ಲಿ ಯುವಕನ ಮನೆಯವರು ಒಡವೆಗಳನ್ನು ಹಾಕಿ ಸಿಂಪಲ್ ಆಗಿ ಮದುವೆ ಮಾಡಿಕೊಂಡು ಕರೆದುಕೊಂಡು ಹೋಗುತ್ತಾರೆ. ಆದರೆ ಯುವತಿ ಮಾತ್ರ ಆತನೊಂದಿಗೆ ಮಲಗಲು ಒಪ್ಪುವುದಿಲ್ಲ. ಎರಡನೇ ದಿನಕ್ಕೆ ತಗಾದೆ ತೆಗೆದು ಮನೆಗೆ ಹೋಗುವುದಾಗಿ ಹಠ ಹಿಡಿಯುತ್ತಾಳೆ. ಇದಕ್ಕೆ ಯುವಕನ ಮನೆಯವರು ಒಪ್ಪದಿದ್ದಾಗ ವರದಕ್ಷಿಣೆ ಕಿರುಕುಳ ಕೇಸ್ ಹಾಕುವುದಾಗಿ ಬೆದರಿಸಿ ಯುವಕನ ಮನೆಯವರು ಹಾಕಿದ್ದ ಒಡವೆಗಳ ಸಮೇತ ಜಾಗ ಖಾಲಿ ಮಾಡುತ್ತಾಳೆ. ಹೀಗೆ ಬಂದಾಗಿ ದೊರಕಿದ ಒಡವೆ ಹಾಗೂ ಹಣವನ್ನು ತಂಡದ ನಾಲ್ವರು ಹಂಚಿಕೊಳ್ಳುತ್ತಾರೆ ವಾರಗಳ ಬಳಿಕ ಮತ್ತೆ ಹೊಸ ಮದುವೆಗೆ ಅವಿವಾಹಿತ ಕುರಿಯನ್ನು ಹುಡುಕಲಾಗುತ್ತದೆ ಎನ್ನುವ ಆತಂಕಕಾರಿ ಘಟನೆಯನ್ನು ವಂಚನೆಗೊಳಗಾದ ಬ್ರಾಹ್ಮಣ ಯುವಕನೊಬ್ಬ ಬಾಯ್ಬಿಡುವ ಮೂಲಕ ಕರಾವಳಿಯನ್ನು ಬೆಚ್ಚಿ ಬೀಳಿಸಿದೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ್ತಿ ರಾಧಾದಾಸ್ ಕುಂದಾಪುರ ಸಂತ್ರಸ್ಥರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಬಳಿ ಕರೆದೊಯ್ದು ದೂರು ನೀಡಲಾಗಿದೆ. ಆದರೆ ವಂಚನೆ ಜಾಲದ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಪೊಲಿಸರು ಪತ್ತೆಹಚ್ಚಬೇಕಾದ ಅಗತ್ಯವಿದೆ. ಆ ಮೂಲಕ ಇಂತಹಾ ಜಾಲಗಳನ್ನು ಮಟ್ಟ ಹಾಕಿ ಸಂತ್ರಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ರಾಧಾದಾಸ್ ಕುಂಭಾಸಿ ಆಗ್ರಹಿಸಿದ್ದಾರೆ.