ಮಂಗಳೂರು, ಡಿ 16(SM): ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ರಿಫಿಲ್ಲಿಂಗ್ ಮಾಡುತ್ತಿದ್ದ ಎರಡು ಕೇಂದ್ರಗಳಿಗೆ ದಾಳಿ ನಡೆದಿದೆ. ಮಂಗಳೂರು ಸಿಸಿಬಿ ಪೊಲೀಸರು ಮತ್ತು ದಕ್ಷಿಣ ಠಾಣಾ ಪೊಲೀಸರು ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯವರೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಹಾಗೂ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಾರ ಹಾಗೂ ಜೆಪ್ಪು ಮಾರ್ಕೆಟ್ ಪರಿಸರದಲ್ಲಿ ಸರಕಾರಿ ಸ್ವಾಮ್ಯದ ಕಂಪೆನಿಗಳಿಂದ ಪೂರೈಕೆಯಾಗುವ ಗೃಹ ಬಳಕೆಯ ಆಡುಗೆ ಅನಿಲ ಸಿಲಿಂಡರ್ ಗಳಿಂದ ಇತರ ಸಿಲಿಂಡರ್ ಗಳಿಗೆ ಅಕ್ರಮವಾಗಿ ರಿಫೀಲಿಂಗ್ ಮಾಡಲಾಗುತ್ತಿತ್ತು.
ಸಿಲಿಂಡರ್ ಗೆ ಗ್ಯಾಸ್ ರಿಫಿಲ್ಲಿಂಗ್ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಈ ಅಕ್ರಮ ದಂಧೆಯಲ್ಲಿ ನಿರತರಾಗಿದ್ದಪ್ರಶಾಂತ್(42), ಸದಾಶಿವ ರೈ(47) ಎಂಬವರನ್ನು ಬಂಧಿಸಿದ್ದಾರೆ.
ಇನ್ನು ಒಟ್ಟು 17 ಗ್ಯಾಸ್ ತುಂಬಿದ ಸಿಲಿಂಡರ್ ಹಾಗೂ 143 ಖಾಲಿ ಸಿಲಿಂಡರ್ ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡುವ ಪಂಪ್ ಹಾಗೂ ಇತರ ಪರಿಕರಗಳು, ಒಂದು ಪಿಕ್ಅಪ್, ಗೂಡ್ಸ್ ಟೆಂಪೋ ಸೇರಿದಂತೆ ಒಟ್ಟು 6,44,400 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಈ ಅಕ್ರಮ ರಿಫಿಲ್ಲಿಂಗ್ ದಂಧೆಯಲ್ಲಿ ಭಾಗಿಯಾದ ಹರೀಶ್ ಹಾಗೂ ಕೂಸಪ್ಪ ರವರು ದಾಳಿ ಸಮಯ ತಲೆಮರೆಸಿಕೊಂಡಿದ್ದಾರೆ.