ಉಡುಪಿ, ಡಿ 16(SM): ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸನ್ಯಾಸಾಶ್ರಮ ಸ್ವೀಕರಿಸಿ 80 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡಿ.27ರಂದು ಉಡುಪಿಯಲ್ಲಿ ರಾಷ್ಟ್ರೀಯ ನಾಗರಿಕ ಅಭಿನಂದನಾ ಸಭೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ ರಾಮವಿಠಲ ಸಭಾಭವನದಲ್ಲಿ ಭಾನುವಾರ ನಡೆಯಿತು.
ಕೃಷ್ಣ ಮಠದ ಸಿಇಒ ಪ್ರಹ್ಲಾದ್ ಆಚಾರ್ಯ ಮಾತನಾಡಿ, ಕಾರ್ಯಕ್ರಮಕ್ಕೆ ರಾಜಾಂಗಣ, ಪಾರ್ಕಿಂಗ್ ಪ್ರದೇಶ, ಪೇಜಾವರ ಮಠದ ಮುಂಭಾಗದ ರಥಬೀದಿಯನ್ನು ಆಯ್ಕೆ ಮಾಡಲಾಗಿದೆ. ಅಧಿಕಾರಿಗಳು ಹಾಗೂ ಶ್ರೀಗಳೊಂದಿಗೆ ಚರ್ಚಿಸಿ ಒಂದು ಸ್ಥಳವನ್ನು ನಿಗದಿಮಾಡಬೇಕಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತನಾಡಿ, ರಾಷ್ಟ್ರಪತಿ, ಇಬ್ಬರು ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರ ಬೆಂಗಾವಲು ವಾಹನಗಳನ್ನು ಪಾರ್ಕ್ ಮಾಡಲು ಸೂಕ್ತ ಸ್ಥಳವಕಾಶದ ಅಗತ್ಯವಿದೆ. ಹೀಗಾಗಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಸಾರ್ವಜನಿಕರ ವಾಹನಕ್ಕೆ ಪ್ರವೇಶವಿಲ್ಲ. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರ ವಿವರವನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿ ಪೂರ್ವಾನುಮತಿ ಪಡೆಯಬೇಕಿದೆ. ಗುರುತು ಚೀಟಿ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಕಲ್ಪಿಸಲಾಗುವುದು. ಆಹ್ವಾನಿತರು 1 ಗಂಟೆ ಮುಂಚಿತವಾಗಿ ಆಗಮಿಸಿ, ಸಭೆಯಲ್ಲಿ ಉಪಸ್ಥಿತರಿರಬೇಕು ಎಂದರು.
ಬೆಳಗ್ಗೆ ಸೀಮಿತ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಆಹ್ವಾನಿಸಿ ಅಭಿನಂದನಾ ಸಭೆ ನಡೆಸಬಹುದು. ಸಂಜೆ 5 ಗಂಟೆಗೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಬೇಕು. ಇಲ್ಲದಿದ್ದರೆ ಬಹು ಸಂಖ್ಯೆಯ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ರಾಜಾಂಗಣದ ಬಾಲ್ಕನಿಯಲ್ಲೂ ಆಸನ ವ್ಯವಸ್ಥೆಗೆ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಲು ಹಾಗೂ ಸ್ಥಳ ನಿಗದಿ ಬಗ್ಗೆ ಪೇಜಾವರ ಶ್ರೀಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು.