ಕಾಸರಗೋಡು, ಡಿ 17(SM): ಕಾಸರಗೋಡಿನಲ್ಲಿ ಸೋಮವಾರ ನಡೆದ ಹಿಂದೂ ಸಮಾಜೋತ್ಸವ ಮುಗಿಸಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಸರಗೋಡು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಹಿಂಸಾತ್ಮಕ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸಮಾಜೋತ್ಸವ ಮುಗಿಸಿ ಮರಳುತ್ತಿದ್ದ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲೆಸೆತ ನಡೆಸಿದ್ದು ಸ್ಥಳದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಇದರಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಇನ್ನು ಉಳಿಯತ್ತಡ್ಕದಲ್ಲಿ ವ್ಯಾಪಾರ ಮಳಿಗೆ ಮೇಲೆ ಕೂಡ ಕಲ್ಲೆಸೆತ ನಡೆದಿದೆ. ಅಲ್ಲದೆ ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, ದೌರ್ಜನ್ಯ ನಡೆಸಿರುವುದಾಗಿ ವರ್ತಕರು ಆರೋಪಿಸಿದ್ದಾರೆ.
ಕೃತ್ಯವನ್ನು ಖಂಡಿಸಿ ಉಳಿಯತ್ತಡ್ಕ ಪೇಟೆಯಲ್ಲಿ ಇಂದು ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯ ತನಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ಕಾಸರಗೋಡಿನ ಇತರ ಕಡೆಗಳಲ್ಲೂ ಕಲ್ಲೆಸೆತದ ಘಟನೆ ನಡೆದಿದೆ. ನಗರದ ಪ್ರೆಸ್ ಕ್ಲಬ್ ಜಂಕ್ಷನ್ ನಲ್ಲಿ ಕಾರಿಗೆ ಕಲ್ಲೆಸೆದ ಪರಿಣಾಮ ರಂಜಿತ್ ಎಂಬವರು ಗಾಯಗೊಂಡಿದ್ದಾರೆ.
ಇನ್ನು ಅಹಿತಕರ ಘಟನೆ ಹಿನ್ನಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ.