ಮಂಗಳೂರು, ಡಿ 17 (MSP): ಹುಲಿ ಕೂಡಾ ಹೆದರುವ ನಾಯಿಯೊಂದು ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅತಿಥಿಯಾಗಿ ಬಂದಿದೆ. ಅರೆ ಇದು ಅಂತಿಂಥಾ ನಾಯಿಯಲ್ಲ, ಒಂಟಿಯಾಗಿ ಸಿಕ್ಕರೆ ಹುಲಿಯನ್ನು ಈ ನಾಯಿಗಳ ಗುಂಪು ಬಿಡಲಾರದು. ಸಾಮಾನ್ಯವಾಗಿ ಇದನ್ನು ಕಾಡುನಾಯಿ, ಚೆನ್ನೆ ನಾಯಿ ಎಂದೂ ಕರೆಯುತ್ತಾರೆ. ಆದರೆ ಇದರ ಹೆಸರು "ಧೋಲ್. ವಿಪರ್ಯಾಸ ಎಂದರೆ ಧೋಲ್ ಕೂಡಾ ಅಳಿವಿನಂಚಿನಲ್ಲಿರುವ ಪ್ರಾಣಿ.
ಇಂಥಹ ಅಪರೂಪದ ಪ್ರಾಣಿ "ಧೋಲ್ " ನ್ನು ಪಿಲಿಕುಳ ಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ತರಿಸಲಾಗಿದೆ. ಗಂಡು ಹೆಣ್ಣು ಎರಡು ಜೋಡಿ ಧೋಲ್ಗಳನ್ನು ಪಿಳಿಕುಳಕ್ಕೆ ತರಲಾಗಿದೆ. ಧೋಲ್ ಅಥವಾ ಕಾಡುನಾಯಿ ಸುಮಾರು 16 ಕೆ.ಜಿ ತೂಕ ಹಾಗೂ 3 ಅಡಿ ಅಗಲವಿರುತ್ತದೆ. 5 ರಿಂದ 12 ನಾಯಿಗಳು ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಇರುತ್ತವೆ. ಕೆಲವು ಕಡೆಗಳಲ್ಲಿ 40 ರಷ್ಟು ದೊಡ್ಡ ಗುಂಪು ಕೂಡ ಕಂಡು ಬರುತ್ತದೆ. ಪಶ್ಚಿಮ ಘಟ್ಟ ಸೇರಿದಂತೆ ಕೆಲವು ಸ್ಥಳದಲ್ಲಿ ಮಾತ್ರ ಕಂಡುಬರುತ್ತಿರುವ ಇವುಗಳು ಅಳಿವಿನಂಚಿನಲ್ಲಿವೆ. ಆಹಾರವಾಗಿ ಇವುಗಳು ಜಿಂಕೆ, ಕಡವೆಯಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ.
ಒಂದು ವಾರದ ಬಳಿಕ ಈ ಹೊಸ ಅಥಿತಿ "ಧೋಲ್'ನ್ನು ವಿಸಿಟರ್ಸ್ ಗಳು ಕಣ್ತುಂಬಿಸಿಕೊಳ್ಳಬಹುದು. ಅದಕ್ಕೂ ಮೊದಲು ಅವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇದರೊಂದಿಗೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಐದು ಪೈಂಟೆಡ್ ಕೊಕ್ಕರೆ, ದೊಡ್ಡ ಜಾತಿಯ ಐದು ಅಲೆಕ್ಸ್ ಜಾಡ್ರಿಯನ್ ಗಿಳಿಗಳನ್ನು ತರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಾಣಿಗಳ ವಿನಿಮಯ ಯೋಜನೆಯನ್ವಯ ಪಿಲಿಕುಳದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಹುಲಿಗಳಲ್ಲಿ ಎರಡು ಗಂಡು, ಕಾಡುಕೋಳಿಗಳ ಪೈಕಿ ನಾಲ್ಕು ಮತ್ತು ಒಂದು ಮೊಸಳೆಯನ್ನು ವಿಶಾಖಪಟ್ಟಣಕ್ಕೆ ನೀಡಲಾಗಿದೆ.