ಮೈಸೂರು,ಡಿ 17 (MSP):ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಸಿ ಮೃತಪಟ್ಟವರ ಸಾವಿನ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.ಘಟನೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಪ್ರಸಾದ ಸೇವಿಸಿದ ಇನ್ನೂ 8 ಮಂದಿಯ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ದೇಗುಲದ ಆವರಣದಲ್ಲಿ ಪ್ರಸಾದ ತಿಂದು ತೀವ್ರ ಅಸ್ವಸ್ಥರಾಗಿದ್ದ ಮೈಲಿಬಾಯಿ ಎಂಬ ಮಹಿಳೆಯನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಮೈಲಿಬಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಷ ಪ್ರಸಾದದಿಂದ ತಂದೆ-ತಾಯಿ ಸಾವು- ತಬ್ಬಲಿಗಳಾದ ಮಕ್ಕಳು
ಪ್ರಸಾದ ಸೇವನೆಯಿಂದ ಮೃತ ಮೈಲಿಬಾಯಿ ಅವರು ಶುಕ್ರವಾರದಂದು ತನ್ನ ಗಂಡ ಕೃಷ್ಣನಾಯಕ ಜತೆಗೂಡಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪ್ರಸಾದ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದ ದಿನವೇ ಪತಿ ಕೃಷ್ಣನಾಯಕ ಮೃತಪಟ್ಟರೆ, ಮೈಲಿಬಾಯಿ ಅವರನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೈಲಿಬಾಯಿ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಸಾದ ದುರಂತಕ್ಕೆ ಬಲಿಯಾದವರ ಸಂಖ್ಯೆ ೧೪ ಕ್ಕೆ ಏರಿಕೆಯಾಗಿದೆ. ಮಾರ್ಟಳ್ಳಿಯ ಕೃಷ್ಣನಾಯ್ಕ್ - ಮೈಲಿಬಾಯಿ ದಂಪತಿಗಳ ಮೂವರು ಮಕ್ಕಳು ಅನಾಥರಾಗಿದ್ದಾರೆ.