ಮೈಸೂರು ಡಿ 17 (MSP): ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ನಡೆದ ದುರಂತಕ್ಕೆ ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಪ್ರಸಾದ ವಿಷವಾಗಿರುವುದಕ್ಕೆ ಇದೀಗ ನಿಖರ ಕಾರಣ ತಿಳಿದುಬಂದಿದೆ.
ವಿಧಿವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ವರದಿಯಂತೆ ಪ್ರಸಾದದಲ್ಲಿ ಕೀಟನಾಶಕ ಬೆರೆಸಲಾಗಿದೆ ಎನ್ನುವುದು ದೃಢಪಟ್ಟಿದೆ. ಭಕ್ತರು ಸೇವಿಸಿದ್ದ ಪ್ರಸಾದದಲ್ಲಿ ವಿಷವನ್ನು ನೇರವಾಗಿ ಬಳಸದೆ ದುಷ್ಕರ್ಮಿಗಳು ಕ್ರಿಮಿನಾಶಕವನ್ನು ಮೊದಲಿಗೆ ನೀರಿನಲ್ಲಿ ಮಿಶ್ರಣ ಮಾಡಿ ನಂತರ ಅದನ್ನು ಪ್ರಸಾದಕ್ಕೆ ಬೆರೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಐಜಿಪಿ ಶರತ್ ಚಂದ್ರ ಅವರು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಂತೆ ಮಾರಮ್ಮ ದೇಗುಲದಲ್ಲಿ ವಿತರಿಸಲಾದ ಪ್ರಸಾದದಲ್ಲಿ ಆರ್ಗಾನ್ ಪಾಸ್ಪಾರಸ್ ಕಾಂಪೌಂಡ್ ಮೊನೊ ಕ್ರೋಟೋ ಫೋಸ್ ಬೆರೆಸಲಾಗಿದೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನು ಕೀಟನಾಶಕವಾಗಿ ಬಳಸಲಾಗುತ್ತದೆ. ಗಿಡಗಳಿಗೆ, ಕ್ರಿಮಿಕೀಟಗಳು ಹುಳುಹುಪ್ಪಟೆ ಭಾಧಿಸಿದಾಗ ಮತ್ತು ರೋಗ ಬಂದಾಗ ಈ ಕೀಟನಾಶವನ್ನು ಸಿಂಪಡಿಸಲಾಗುತ್ತದೆ. ಇದೇ ಕ್ರಿಮಿನಾಶಕವನ್ನು ಬೆರೆಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ತನಿಖೆ ಮುಂದುವರಿದಿದ್ದು, ೧೩ ಮಂದಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ಕರೆದುಕೊಂಡು ಪ್ರಶ್ನೆ ಮಾಡಿ ವಿಚಾರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.