ಉಡುಪಿ, ಡಿ 17 (MSP): ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮವೊಂದರಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿದ್ದು, ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಹಳೆಯ ಪೇತ್ರಿ ಚರ್ಚ್ ನ್ನು ನಾಶ ಮಾಡಿದಕ್ಕಾಗಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರು ಮಾಡಿದ್ದಾರೆ ಎಂದು ಹೇಳಿದ ಮಧ್ವರಾಜ್ ಮಾತುಗಳು ಈ ವಿಡಿಯೋ ತುಣುಕಿನಲ್ಲಿ ಹೇಳಿದ್ದಾರೆ.
ಈ ವಿಡಿಯೋ ತುಣುಕು ಡಿ.10 ರಂದು ನಡೆದ ಬ್ರಹ್ಮಾವರ ಸಮೀಪದ ಪೇತ್ರಿಯ ಸೈಂಟ್ ಪೀಟರ್ಸ್ ಚಚ್ ನ ಸುವರ್ಣ ಮಹೋತ್ಸವ ಸಮಾರಂಭ ಭಾಗವಹಿಸಿದ ಸಂದರ್ಭದ್ದು ಎಂದು ತಿಳಿದುಬಂದಿದೆ. ಚರ್ಚ್ನ ೫೦ನೇ ವರ್ಷದ ಕಾರ್ಯಕ್ರಮಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ಮಾಜಿ ಸಚಿವರು ಪೇತ್ರಿಯ ಸೈಂಟ್ ಪೀಟರ್ ಚರ್ಚ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ೨೦೧೬ ಮತ್ತು ೨೦೧೭ರಲ್ಲಿ ಉಡುಪಿಯಲ್ಲಿ ರಾಜ್ಯ ಸರಕಾರದ ವತಿಯಿಂದ ನಡೆದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲೂ ನಾನು ಸಚಿವನಾಗಿದ್ದರೂ ಪಾಲ್ಗೊಂಡಿರಲಿಲ್ಲ ಎಂದು ಪ್ರಮೋದ್ ಹೇಳಿದ್ದರು. ಇದೀಗ ಮಾಜಿ ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ. ಪ್ರಮೋದ್ ತನ್ನ ಹೇಳಿಕೆಗಳಿಂದ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುತ್ತಿದ್ದಾರೆ ಎಂದು ರಿಯಾಝ್ ಎಂಬವರು ವಾಟ್ಸಾಪ್ ಗ್ರೂಪ್ನಲ್ಲಿ ಪ್ರಮೋದ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.