ನವದೆಹಲಿ, ಡಿ 17 (MSP): 2004ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಸೋಲ ಅನುಭವಿಸಿದಂತೆಯೇ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೂ ಸೋಲಿನ ಕಹಿ ಅನುಭವ ಆಗಲಿದೆ ಎಂದು ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ದೆಹಲಿಯಲ್ಲಿ ನಡೆದ ಅಜೆಂಡಾ ಆಜ್ತಕ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಲೋಕಸಭೆ ಚುನಾವಣೆಯ ಮೊದಲು ಪ್ರತಿ ಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಆ ಬಳಿಕವಷ್ಟೇ ಪ್ರಧಾನಿ ಯಾರು ಎಂದು ತಿಳಿಯಲಿದೆ ಎಂದರು. ಯಾಕೆಂದರೆ 2004ರಲ್ಲಿಯೂ ವಾಜಪೇಯಿ ಎದುರು ಪ್ರತಿಪಕ್ಷವೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಹೀಗಾಗಿ ಈಗಲೂ ಕೂಡಾ ಮೋದಿ ಮುಂದೆ ಸ್ವರ್ಧಿಸುವ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುವುದಿಲ್ಲ. ಅಂದಿನ ಫಲಿತಾಂಶ ಯಾರ ಪರ ಬಂತು ಎಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಆ ಬಳಿಕ ಪ್ರಧಾನಿಯಾದ ಮನಮೋಹನ್ ಸಿಂಗ್ 10 ವರ್ಷ ಆಡಳಿತ ನಡೆಸಿದರು. ಇದೇ ಇತಿಹಾಸ 2019 ರಲ್ಲೂ ಮರುಕಳಿಸಲಿದೆ ಎಂದರು. ಹೀಗಾಗಿ ಪ್ರತಿಪಕ್ಷಳು ಸದ್ಯ ಬಿಜೆಪಿ ವಿರೋಧಿ ಮತಗಳನ್ನು ಹೇಗೆ ಒಟ್ಟುಗೂಡಿಸಬಹುದು ಎಂಬುದನ್ನು ಲೆಕ್ಕ ಹಾಕಿದೆ ಎಂದು ಅವರು ಹೇಳಿದರು.