ಬೆಳ್ಮಣ್, ಡಿ 17(SM): ಘನ ವಾಹನಗಳ ಸಂಚಾರದಿಂದಾಗಿ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿದೆ. ಸಣ್ಣ ಪುಟ್ಟ ವಾಹನಗಳು ಕೂಡ ಓಡಾಡುವುದು ಅಸಾಧ್ಯವಾಗಿದ್ದು, ಇದರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡ ಘಟನೆ ಕಾರ್ಕಳ ತಾಲೂಕಿನ ಕಲ್ಯಾದಲ್ಲಿ ನಡೆದಿದೆ.
ಪ್ರತಿನಿತ್ಯ ಹತ್ತು ಚಕ್ರದ ಘನ ವಾಹನಗಳ ಆರ್ಭಟ ಹೆಚ್ಚಾಗುತ್ತಿದ್ದು ಗ್ರಾಮಸ್ಥರ ನೆಮ್ಮದಿಯನ್ನು ಕಸಿಯುತ್ತಿದೆ ಎಂದು ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮಸ್ಥರೆಲ್ಲ ಸೇರಿ ಘನ ವಾಹನವನ್ನು ತಡೆದು ನಿಲ್ಲಿಸಿ ಸೋಮವಾರ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾ ಹಾಗೂ ನಂದಳಿಕೆ ಗ್ರಾಮದಲ್ಲಿ ಬಹುತೇಕ ಕೋರೆಗಳಿದ್ದು ಇಲ್ಲಿಂದ ಜಲ್ಲಿ ಕಲ್ಲುಗಳನ್ನು ಸಾಗಟ ನಡೆಸುವ 10 ಚಕ್ರದ ಘನ ವಾಹನ ನಿತ್ಯ ಇಲ್ಲಿ ನೂರಾರು ಬಾರೀ ಓಡಾಟವನ್ನು ನಡೆಸುತ್ತದೆ. ಈ ಹಿನ್ನಲೆಯಲ್ಲಿ ಈ ಭಾಗದ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗುವ ಮಟ್ಟ ತಲುಪಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಳಿಗ್ಗೆಯಿಂದಲೇ ಹಲವಾರು ಘನವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿ ಬಳಿಕ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಂಬಿಕಾ ಮಠದ ಶ್ರೀ ಉಮಾಮಹೇಶ್ವರ ಸ್ವಾಮೀಜಿ, ಸಂಜೀವ ಶೆಟ್ಟಿ, ಮಹೇಶ್ ಪೂಜಾರಿ, ಜೀವನ್ ಕಲ್ಯಾ, ಸತೀಶ್ ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು.