ಉಡುಪಿ, ಡಿ 18 (MSP): ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ, ಪೋಕ್ಸೋ ಪ್ರಕರಣದ ಆರೋಪಿ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ನ್ಯಾಯಾಂಗ ಬಂಧನದ ಅವಧಿಯನ್ನು ಜಿಲ್ಲಾ ಹೆಚ್ಚುವರಿ ಸಿವಿಲ್ ನ್ಯಾಯಾಲಯ 15 ( ಡಿ.31) ದಿನಗಳವರೆಗೆ ವಿಸ್ತರಿಸಿದೆ.
ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶರ ವರ್ಗಾವಣೆ, ಕುಂದಾಪುರ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ರಜೆ ಹಿನ್ನಲೆಯಲ್ಲಿ ಆರೋಪಿಯನ್ನು ಸೋಮವಾರ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಮಕ್ಷಮ ಹಾಜರುಪಡಿಸಲಾಯಿತು. ಬೈಂದೂರಿನಲ್ಲಿ ದಾಖಲಾದ ಮೊದಲ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಯಿತು. ಪೋಕ್ಸೋ ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿ ಉಪಸ್ಥಿತರಿದ್ದರು. ಆರೋಪಿ ಪರ ವಕೀಲರು ಇರಲಿಲ್ಲ. ಇನ್ನುಳಿದ 20 ಪ್ರಕರಣದ ವಿಚಾರಣೆಗೆ ತನಿಖಾಧಿಕಾರಿ ಪರವಾಗಿ ಅಭಿಯೋಜಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶ ಡಿ.31 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದರು.
ಚಂದ್ರ ಹೆಮ್ಮಾಡಿ ವಿರುದ್ಧ ಬೈಂದೂರು, ಗಂಗೊಳ್ಳಿ, ಕುಂದಾಪುರ, ಕೊಲ್ಲೂರು ಠಾಣೆಗಳಲ್ಲಿ 21 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಆರೋಪಿಯೊಬ್ಬನ ವಿರುದ್ಧ ದಾಖಲಾದ ಗರಿಷ್ಠ ಪೋಕ್ಸೋ ಪ್ರಕರಣ ಇದಾಗಿದೆ.