ಮಂಗಳೂರು,ಡಿ 18 (MSP): ಸಂಚಾರಿ ಪೊಲೀಸರು ನೀಡಿದ ಸೂಚನೆಯಂತೆ, ಚಲಿಸುತ್ತಿದ್ದ ಲಾರಿಯೊಂದು ನಿಲುಗಡೆಗೆ ಯತ್ನಿಸುತ್ತಿದ್ದಾಗ ಅನಿರೀಕ್ಷಿತವಾಗಿ ಮಗುಚಿ ಬಿದ್ದು ಲಾರಿಯಲ್ಲಿದ್ದ ಕ್ಲೀನರ್ ಯುವಕ ಮೃತಪಟ್ಟ ಘಟನೆ ಡಿ.18 ರ ಮಂಗಳವಾರ ನಗರದ ತೊಕ್ಕೊಟ್ಟಿನಲ್ಲಿ ನಡೆದಿದೆ.
ಕೇರಳ ಕಡೆಗೆ ತೆರಳುತ್ತಿದ್ದ ಲಾರಿಯೊಂದು ತೊಕ್ಕೊಟ್ಟು ಬಳಿ ಬಂದಾಗ ಟ್ರಾಫಿಕ್ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಂತೆಯೇ ಲಾರಿ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಯತ್ನಿಸುತ್ತಿದ್ದಾಗ, ಲಾರಿಯ ಚಕ್ರವು ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹಾಸಲಾದ ಕಾಂಕ್ರೀಟ್ ಸ್ಲಾಬ್ ಮೇಲೆ ಹತ್ತಿದೆ. ಅತಿಯಾದ ಭಾರ ಹೆಚ್ಚಾಗಿದ್ದರಿಂದ ಸ್ಲಾಬ್ ಮುರಿದು, ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಶಿವಮೊಗ್ಗ ಮೂಲದ ವಸಂತ್ ಕುಮಾರ್ ಲಾರಿ ಅಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾರೆ.
ಘಟನೆ ಬಳಿಕ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವ ಟ್ರಾಪಿಕ್ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಮಾರು ಎರಡು ಗಂಟೆಗಳ ಕಾಲ ನೂರಾರು ನೂರಾರು ಮಂದಿ ಪ್ರತಿಭಟನೆ ನಡೆಸಿದರು.