ಮೂಡುಬಿದಿರೆ,ಡಿ 18 (MSP): ಸಮಾಜದಲ್ಲಿ ಐಕ್ಯತೆಯ ಭಾವ ಮೂಡಿಸಿ ಬಾಂಧವ್ಯ ವೃದ್ಧಿಸುವ ಕಾರ್ಯವನ್ನು ಶಿರ್ತಾಡಿಯ ಮೂವರು ಯುವಕರು ನಡೆಸುವ ಮೂಲಕ ಸಾರ್ಥಕ ಕ್ರಿಸ್ಮಸ್ ಸಂದೇಶ ರವಾನಿಸಿದ್ದಾರೆ.
ನೂತನ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮೂರೂ ಧರ್ಮದ ಮಂದಿ ವಾಸವಾಗಿದ್ದಾರೆ. ಶಾಂತಿ ಸೌಹಾರ್ದದ ಬೀಡಾಗಿರುವ ಶಿರ್ತಾಡಿಯ ಮೂವರು ಯುವಕರು ಸೇರಿಕೊಂಡು ಈ ಬಾರಿಯ ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಠವಾಗಿ ಆಚರಿಸುವತ್ತ ಹೆಜ್ಜೆಯಿಟ್ಟಿದ್ದಾರೆ.
ಸಮಾಜದಲ್ಲಿ ಅಶಾಂತಿ ಮತ್ತು ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯ ಎರಡೂ ಒಂದೇ ಎಂಬ ಅಭಿಪ್ರಾಯಕ್ಕೆ ಬಂದ ಈ ಮೂವರು ಯುವಕರು ಅದಕ್ಕಾಗಿ ಕ್ರಿಸ್ಮಸ್ ಹಬ್ಬದ ಸಂದರ್ಭವನ್ನು ಬಳಸಿಕೊಂಡು ಸಮಾಜಕ್ಕೆ ಸಂದೇಶ ನೀಡುವ ಕೈಂಕರ್ಯವನ್ನು ಮಾಡಿದ್ದು, ಶಿರ್ತಾಡಿಯ ಪ್ರಸನ್ನ ಜೋಯೆಲ್ ಸಿಕ್ವೇರಾ, ಯತೀಶ್ ಕುಲಾಲ್, ಅಬ್ದುಲ್ ರವೂಫ್ ಎಂಬವರೇ ಈ ಯುವಕರು.
ಈ ಮೂವರು ಸೇರಿಕೊಂಡು 15 ದಿನಗಳ ಕಾಲ ಹಗಲು ರಾತ್ರಿಯ ಪರಿವಿಲ್ಲದೇ ನಿರಂತರವಾಗಿ ಶ್ರಮಿಸಿ 20 ಅಡಿ ಎತ್ತರ ಮತ್ತು 20 ಅಡಿ ಅಗಲದ ಅತಿದೊಡ್ಡ ಕ್ರಿಸ್ಮಸ್ ನಕ್ಷತ್ರವನ್ನು ರಚಿಸಿದ್ದು, ಅಷ್ಟು ದೊಡ್ಡ ನಕ್ಷತ್ರ ತಯಾರಿಸುವಾಗ ಎಲ್ಲೂ ಕೂಡಾ ಪ್ಲಾಸ್ಟಿಕ್ ಬಳಸದಿರುವ ಮೂಲಕ ಗಮನ ಸೆಳೆದಿದ್ದಾರೆ. ಈ ನಕ್ಷತ್ರವೀಗ ಇಲ್ಲಿನ ಮೌಂಟ್ ಕಾರ್ಮೆಲ್ ಚರ್ಚ್ನ ಆವರಣದಲ್ಲಿ ನಿಲ್ಲಿಸಲಾಗಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ. ನಕ್ಷತ್ರ ರಚನೆಗಾಗಿ ಬಿಳಿ ಬಟ್ಟೆಯನ್ನು ಶಾಂತಿಯ ಪ್ರತೀಕವಾಗಿ ಬಳಸಲಾಗಿದ್ದು, ಅಧಿಕ ನಿರ್ಮಾಣ ವೆಚ್ಚವಾದರೂ ಹಬ್ಬದ ಸಂದೇಶ ಸಾರ್ವತ್ರಿಕವಾಗಿ ತಲುಪಲಿ ಎನ್ನುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ.
ಈ ನಕ್ಷತ್ರವನ್ನು ಪ್ರಾಕೃತಿಕವಾಗಿ ಲಭ್ಯವಿರುವ ಪರಿಸರ ಸ್ನೇಹಿ ವಸ್ತುಗಳಿಂದಲೇ ತಯಾರಿಸಲಾಗಿದ್ದು, ಈ ಮೂವರು ಯುವಕರಲ್ಲದೇ ಇವರ ಜೊತೆಗೆ ಸುಮಾರು 7 ಮಂದಿ ಇದರ ತಯಾರಿಕೆಯಲ್ಲಿ ತಮ್ಮನ್ನು ತಾವೇ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದರು. ಈ 10 ಮಂದಿಯ ತಂಡದಲ್ಲೂ ಎಲ್ಲ ಧರ್ಮದ ಯುವಕರೂ ಇದ್ದರೆನ್ನುವುದು ಇನ್ನೊಂದು ವಿಶೇಷ. 15 ದಿನಗಳ ಪರ್ಯಂತ ನಡೆದ ಈ ನಕ್ಷತ್ರ ರಚನೆಯ ಕಾರ್ಯದಲ್ಲಿ ಎಲ್ಲ ಯುವಕರೂ ಒಂದೇ ಬಣ್ಣದ ಕ್ರಿಸ್ಮಸ್ ಶುಭಾಶಯ ಬರೆಯಲಾಗಿದ್ದ ಟೀಶರ್ಟ್ನ್ನು ಸಮವಸ್ತ್ರದಂತೆ ಧರಿಸಿದ್ದರು.
ಪರಿಸರ ಸ್ನೇಹಿ ತಯಾರಿಕೆ : ಬಿದಿರು, ಬಳಸಿದ ಮರದ ತುಂಡುಗಳನ್ನು ಬಳಸಿ ನಿರ್ಮಿಸಿರುವ ಈ ನಕ್ಷತ್ರವು ಸಂಪೂರ್ಣ ಬಿಳಿ ಬಟ್ಟೆಯ ಹೊದಿಕೆಯಿಂದ ಕೂಡಿದ್ದು ಬಟ್ಟೆಯ ಮೇಲೆ ಅಡಿಕೆ ಸಿಪ್ಪೆ ಅಂಟಿಸಲಾಗಿದೆ. ನಕ್ಷತ್ರದ ಮಧ್ಯಭಾಗದಲ್ಲಿರುವ ಚೌಕಾಕಾರದಲ್ಲಿ ಬಾಲಯೇಸುವಿನ ಮೂರ್ತಿಯನ್ನು ತೊಟ್ಟಿಲಿನಲ್ಲಿಡಲಾಗಿದ್ದು, ಆ ತೊಟ್ಟಿಲು ತೂಗುತ್ತಲೇ ಇರುತ್ತದೆ. ಹೊರಗಿನಿಂದ ಬಣ್ಣದ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದು, ನಕ್ಷತ್ರದ ಕೆಳಗೆ ನೀರಿನ ಕಾರಂಜಿಯನ್ನು ಜೋಡಿಸಲಾಗಿದೆ.
30 ಮೀಟರ್ ಬಿಳಿ ಬಟ್ಟೆ, 50 ಕೆಜಿ ಅಡಿಕೆ ಸಿಪ್ಪೆ, 10 ಕೆಜಿ ಮೈದಾ, ಕಾರಿನ ವೈಪರ್ ಮೋಟಾರ್, 20 ಫೀಟು ಬಿದಿರು, 15 ಫೀಟು ಹಳೆಯ ಮರದ ತುಂಡು, 250 ಗ್ರಾಮ್ ಸೆಣಬಿನ ಹಗ್ಗವನ್ನು ನಕ್ಷತ್ರಕ್ಕಾಗಿ ಬಳಸಲಾಗಿದೆ. 20 ಮೀಟರ್ ಉದ್ದದ ಜಪಸ್ವರವನ್ನು ಈ ಯುವಕರು ತಯಾರಿಸಿದ್ದು ಅದನ್ನು ಈ ನಕ್ಷತ್ರದ ಮೇಲೆ ಅಳವಡಿಸಲಾಗಿದೆ. ಜಪಸ್ವರಕ್ಕಾಗಿ 60 ಅಡಿಕೆಯನ್ನು ಹಾಗೂ ಬಟ್ಟೆಯ ಹಗ್ಗವನ್ನು ಬಳಸಲಾಗಿದೆ.
ಶಾಂತಿ ಸೌಹಾರ್ದತೆಯೇ ಮುಖ್ಯ ಉದ್ದೇಶ : ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ಬೆಳಕು ಹರಿಯಬೇಕಾದರೆ ಸರ್ವಧರ್ಮೀಯರೂ ತಮ್ಮ ಹೃದಯವನ್ನು ಮಾನವೀಯತೆಯ ಬಾಗಿಲುಗಳಾಗಿ ಪರಿವರ್ತಿಸುವ ಅಗತ್ಯವಿದೆ. ಬಹುಸಂಸ್ಕøತಿಯ ನಾಡಾಗಿರುವ ನಮ್ಮ ಭಾರತ ದೇಶದ ವೈವಿದ್ಯತೆಯಲ್ಲೂ ಐಕ್ಯಭಾವ ಹೊಂದುವುದರಿಂದ ಇಲ್ಲಿನ ಸರ್ವರೂ ಸುಖಿ ಜೀವಿಗಳಾಗಿ ಬದುಕು ಸಾಗಿಸುವ ಅವಕಾಶವೊದಗುತ್ತದೆ.
ಕ್ರಿಸ್ಮಸ್ ಹಬ್ಬದ ಸಂಭ್ರಮದ ದಿನಗಳಲ್ಲಿ ನಾವು ಸ್ನೇಹಿತರು ಜೊತೆಗೂಡಿ ರಚಿಸುವ ನಕ್ಷತ್ರ ರಚನೆಯ ಹಿಂದೆ ಸಮಾಜದಲ್ಲಿ ಒಗ್ಗಟ್ಟು ಮತ್ತು ಬಾಂಧವ್ಯ ಬೆಸೆಯುವ ಉದ್ದೇಶವಿದೆ. ಶಾಂತಿ ಪಸರಿಸುವ ಸದುದ್ದೇಶದ ಚಿಂತನೆಗಾಗಿ ಮೂರೂ ಧರ್ಮಗಳ ಮಂದಿ ಹಗಲು ರಾತ್ರಿ ಕೈಜೋಡಿಸಿ ನಿರ್ಮಾಣ ಮಾಡಿದ್ದೇವೆ. ಪ್ಲಾಸ್ಟಿಕ್ ಮುಕ್ತ ಪರಿಸರ ಕಾಳಜಿಯನ್ನು ಈ ನಕ್ಷತ್ರದ ಮೂಲಕ ಕ್ರಿಸ್ಮಸ್ ಸಂದೇಶ ಸಾರಲಾಗಿದೆ.
- ಪ್ರಸನ್ನ ಜೋಯೆಲ್ ಸಿಕ್ವೇರಾ, ನಕ್ಷತ್ರ ತಯಾರಕರು.
ನಕ್ಷತ್ರ ತಯಾರಿಕೆ ತೃಪ್ತಿ ತಂದಿದೆ: ಕಳೆದ 5 ವರ್ಷದಿಂದಲೂ ನಾವು ಸಣ್ಣ ಪ್ರಮಾಣದಲ್ಲಿ ನಕ್ಷತ್ರವನ್ನು ತಯಾರಿಸುತ್ತಿದ್ದು, ಈ ಬಾರಿ ದೊಡ್ಡ ಆಕಾರದಲ್ಲಿ ತಯಾರಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದೆವು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಚರ್ಚ್ ಹಾಗೂ ಕ್ರೈಸ್ತ ಧರ್ಮೀಯರಲ್ಲಿ ನಮಗೆ ಅಪಾರ ವಿಶ್ವಾಸವಿದ್ದು, ಸ್ನೇಹಪೂರ್ವಕ ನಡವಳಿಕೆಯಿಂದ ಸಮಾಜದಲ್ಲಿ ಎಲ್ಲರೂ ಜೊತೆಯಾಗಿ ಬಾಳುತ್ತಿದ್ದೇವೆ. ಕ್ರಿಸ್ಮಸ್ ಸಂದರ್ಭದಲ್ಲಿ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡದ್ದರಿಂದ ತೃಪ್ತಿಯಿದೆ.
- ಯತೀಶ್ ಕುಲಾಲ್, ನಕ್ಷತ್ರ ತಯಾರಕ
ಅರಿತು ಬಾಳಬೇಕು : ಬದಲಾಗುತ್ತಿರುವ ಆಧುನಿಕತೆಯ ಜೀವನದಲ್ಲಿ ನೆರೆಮನೆಯವರನ್ನು ಅರಿಯುವ ಪ್ರಯತ್ನವನ್ನೇ ಇಂದಿನ ಪೀಳಿಗೆ ಮಾಡುತ್ತಿಲ್ಲ. ಇದರಿಂದ ಮುಂದೆ ವೈವಿದ್ಯಪೂರ್ಣ ಸಮಾಜದಲ್ಲಿ ಅತೃಪ್ತಿಯ ಭಾವನೆಗಳು ಕಾಡುವ ಸಾಧ್ಯತೆಗಳಿವೆ. ಧರ್ಮಗಳೆಲ್ಲವೂ ಶಾಂತಿಯನ್ನೇ ಬೋಧಿಸುವುದರಿಂದ ಅದರ ಅರಿವು ಎಲ್ಲರಿಗೂ ಆಗಬೇಕಿದೆ. ಸಮಾಜದಲ್ಲಿ ಪರಸ್ಪರರನ್ನು ಅರಿತು ಬಾಳುವುದು ಅತಿಮುಖ್ಯ. ಕ್ರಿಸ್ಮಸ್ ಹಬ್ಬದ ಸಂದರ್ಭ ಸಮಾಜದ ಶಾಂತಿ ಬಯಸುವ ಎಲ್ಲರಿಗೂ ಈ ನಕ್ಷತ್ರ ಮಾದರಿಯಾಗಬೇಕು ಎಂಬ ಉದ್ದೇಶ ನಮ್ಮದು.
- ಅಬ್ದುಲ್ ರವೂಫ್, ನಕ್ಷತ್ರ ತಯಾರಕ.