ಹಾವೇರಿ, ಡಿ 18 (MSP): 'ನ್ಯಾಯ ಒದಗಿಸಿ ಕೊಡಿ' ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಲು ಬಂದ್ರೆ , 'ಮಂಚಕ್ಕೆ ಬಾ ನ್ಯಾಯ ಕೊಡಿಸ್ತೀನಿ ' ಎಂಬ ಮಾತು ಪೊಲೀಸ್ ಅಧಿಕಾರಿ ಬಾಯಿಯಿಂದ ಬಂದರೆ ಆ ಮಹಿಳೆಗೆ ಹೇಗಿರಬೇಡ ಹೇಳಿ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದ್ದು ಇದೇ.
ಕಾಮುಕರಿಂದ ರಕ್ಷಣೆ ನೀಡಬೇಕಾಗಿದ್ದ ಪೊಲೀಸ್ ಅಧಿಕಾರಿಯೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಗ್ರಾಮಸ್ಥರು ಸಿಟ್ಟಿಗೆದ್ದು ಧರ್ಮದೇಟು ಘಟನೆ ಬ್ಯಾಡಗಿ ತಾಲೂಕು ಪಂಚಾಯ್ತಿ ಕಚೇರಿ ಎದುರು ನಡೆದಿದೆ. ಘಟನೆಯ ಬಳಿಕ ಬೇಲಿಯೇ ಎದ್ದು ಹೊಲ ಮೇಯ್ದರೆ ಕೇಳುವವರಾರು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಮಹಿಳೆ ಒಬ್ಬಾಕೆ ತನ್ನ ಮೇಲೆ ಹಲ್ಲೆ ನಡೆಸಿದ್ದ ಸಂಬಂಧಿಕರ ವಿರುದ್ದ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದಳು. ಆದರೆ ಈ ಸಂದರ್ಭ ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿ ಪೊಲೀಸ್ ಇನ್ಸ್ ಪೆಕ್ಟರ್ ಮಂಚಕ್ಕೆ ಬಾ ಎಂದು ಕರೆದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಗ್ರಾಮಸ್ಥರೊಂದಿಗೆ ಅಳಲು ತೋಡಿಕೊಂಡಿದ್ದಾಳೆ. ಬಳಿಕ ಗ್ರಾಮಸ್ಥರೊಂದಿಗೆ ಸೇರಿ ಬ್ಯಾಡಗಿಗೆ ಆಗಮಿಸಿ ಇನ್ಸ್ ಪೆಕ್ಟರ್ ವಿರುದ್ಧವೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು, ಇನ್ಸ್ ಪೆಕ್ಟರ್ ನ ಸಮವಸ್ತ್ರ ಎಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಎಸ್ ಪಿ ಎಲ್ ಕುಮಾರಪ್ಪಾ ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಾರೆ.
ಇನ್ನು ಮಹಿಳೆ ನೀಡಿರುವ ದೂರು ಹಾಗೂ ಇನ್ಸ್ ಪೆಕ್ಟರ್ ನೀಡಿರುವ ದೂರನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸುತ್ತಿರುವುದಾಗಿ ಹೆಚ್ಚುವರಿ ಎಸ್ ಪಿ ಜಿಎ ಜಗದೀಶ್ ಹೇಳಿದ್ದಾರೆ.