ಮಂಗಳೂರು, ಡಿ 18(SM): ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರದಿಂದ ತಪ್ಪು ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಾಗಿದೆ. ರಫೇಲ್ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕೆನ್ನುವುದು ಕಾಂಗ್ರೆಸ್ನ ನಿಲುವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಫೇಲ್ ಒಪ್ಪಂದ ದೇಶದ ರಕ್ಷಣಾ ವಿಭಾಗಗಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಹಗರಣವಾಗಿದೆ. ಎಚ್ಎಎಲ್ ದೇಶದ ರಕ್ಷಣಾ ವಿಭಾಗಕ್ಕೆ ವಿಮಾನ ತಯಾರಿಸಲು ಸಾಮರ್ಥ್ಯ ಹೊಂದಿರುವ ೪೦ ವರ್ಷಗಳ ಅನುಭವ ಹೊಂದಿರುವ ಏಕೈಕ ಸಂಸ್ಥೆಯಾಗಿದೆ.
ಇದನ್ನು ಹೊರತು ಪಡಿಸಿ ಇನ್ನೊಂದು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾರಣವೇನು? ಈ ಸಂಸ್ಥೆಯಲ್ಲಿ ವಿಮಾನ ಖರೀದಿಗೆ ಸಂಬಂಧಿಸಿದಂತೆ ಯುಪಿಎ ಸರಕಾರ ಇರುವಾಗ ಆಗಿರುವ ಒಪ್ಪಂದವನ್ನು ಬದಲಾಯಿಸಿ ರಫೇಲ್ ಮೂಲಕ ರಿಲಾಯೆನ್ಸ್ ಡಿಫೆನ್ಸ್ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ದೇಶದ ಬೊಕ್ಕಸಕ್ಕೆ 41,205 ಕೋಟಿ ರೂ. ನಷ್ಟವಾಗಲು ಕಾರಣವಾಗಿರುವ ಹಗರಣವನ್ನು ದೇಶದ ಜನರ ಮುಂದೆ ಬಹಿರಂಗ ಪಡಿಸಬೇಕೆಂದು ಹೇಳಿದರು.