ಚಾಮರಾಜನಗರ, ಡಿ 18(SM): ಚಾಮರಾಜನಗರದ ಸುಳ್ವಾಡಿ ಗ್ರಾಮದಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ವಿಷ ಪ್ರಸಾದ ದುರಂತಕ್ಕೆ ಕಾರಣ ತಿಳಿದು ಬಂದಿದೆ. ಪ್ರಸಾದದಲ್ಲಿ ವಿಷ ಬೆರೆಸಲು ತಾನೇ ಕಾರಣ ಎಂದು ಅಂಬಿಕಾ ಎಂಬ ಮಹಿಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ದುರಂತಕ್ಕೆ ಕಾರಣ ಬಹಿರಂಗವಾಗುವ ಸುಳಿವು ದೊರೆಯುವ ಸಾಧ್ಯತೆ ಇದೆ. ದೇವಸ್ಥಾನದ ಕಿರಿಯ ಸ್ವಾಮೀಜಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
ಸಾಲೂರು ಮಠದ ಕಿರಿಯ ಸ್ವಾಮೀಜಿ, ಟ್ರಸ್ಟ್ನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆಯಂತೆ ತಾನೇ ಪ್ರಸಾದಕ್ಕೆ ವಿಷ ಬೆರೆಸಿದ್ದಾಗಿ ಮಾದೇಶ ಅವರ ಪತ್ನಿ ಅಂಬಿಕಾ ಪೊಲೀಸರ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಕೆಲವೊಂದು ಮೂಲಗಳು ತಿಳಿಸಿವೆ. ಆದರೆ, ಅಂಬಿಕಾ ಅವರೇ ವಿಷ ಬೆರೆಸಿದ್ದೇ ಹೌದಾ ಅನ್ನೋದು ಮಾತ್ರ ತನಿಖೆಯ ಬಳಿಕವಷ್ಟೇ ತಿಳಿಯಲಿದೆ. ಅಲ್ಲದೆ ಯಾವ ಕಾರಣಕ್ಕೆ ಇಂತಹ ನೀಚ ಕೃತ್ಯ ಎಸಗಲಾಗಿದೆ ಅನ್ನೋದು ಕೂಡ ತನಿಖೆಯಿಂದಲೇ ಬಹಿರಂಗಗೊಳ್ಳಲಿದೆ.
ಮಠದ ವ್ಯವಸ್ಥಾಪಕ ಮಾದೇಶ ಮತ್ತು ಆತನ ಪತ್ನಿ ಅಂಬಿಕಾ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟ್ರಸ್ಟ್ ಮೇಲೆ ಹಿಡಿತದ ಗುರಿ ತಮಿಳುನಾಡಿನವರಾದ ಅಂಬಿಕಾ ಮಾದೇಶ್ ಅವರನ್ನು ಮದುವೆಯಾದ ಬಳಿಕ ಗ್ರಾಮದಲ್ಲಿ ನೆಲೆಸಿದ್ದರು. ಮಠ ಮತ್ತು ದೇವಸ್ಥಾನದ ಹಿಡಿತವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದರು. ಟ್ರಸ್ಟ್ನ ಪೂಜಾರಿ ಚಿನ್ನಪ್ಪಿ ಅವರನ್ನು ಬೆದರಿಸುವುದು ಅವರ ಗುರಿಯಾಗಿತ್ತು. ಈ ಕಾರಣಗಳಿಂದ ಆಹಾರಕ್ಕೆ ವಿಷ ಬೆರೆಸಿದ್ದರು ಎನ್ನಲಾಗಿದೆ.
ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತನಿಖೆಯಿಂದ ತಿಳಿಯಬಹುದಾಗಿದೆ.