ಬಂಟ್ವಾಳ, ಡಿ 18(SM): ಮಾಜಿ ಸಚಿವ ಬಿ.ರಮಾನಾಥ ರೈ ಅವರು ದಿಢೀರ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಮಾಜಿ ಸಚಿವರ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರೈ ಅವರ ದೆಹಲಿ ಚಲೋ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಮಾನಾಥ ರೈ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಒಲವು ತೋರುತ್ತಿದ್ದಾರೆ ಎಂಬುದು ಇತ್ತೀಚಿನ ಅವರ ನಡವಳಿಕೆಗಳು ಸ್ಪಷ್ಟ ಪಡಿಸಿದೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ರಾಷ್ಟ್ರ ರಾಜಕಾರಣದತ್ತ ಮುಂದಡಿಯಿಡಲು ರೈ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬುವುದು ಈಗಾಗಲೇ ಸ್ಪಷ್ಟಗೊಂಡಿದೆ.
ಒಂದೊಮ್ಮೆ ಹೈಕಮಾಂಡ್ ಟಿಕೆಟ್ ನೀಡಿದ್ದಲ್ಲಿ ಮುಂಬರುವ ಲೋಕಸಭಾ ಸಮರಕ್ಕೆ ಸ್ಪರ್ಧಿಸುವುದಾಗಿ ರೈ ತಿಳಿಸಿದ್ದರು. ಇದೀಗ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಕೂಡ ಲೋಕಸಭೆಗೆ ದ.ಕ. ಜಿಲ್ಲೆಯಿಂದ ಟಿಕೆಟ್ ಸಿಕ್ಕಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಜನಾರ್ದನ ಪೂಜಾರಿ ಹೈಕಮಾಂಡ್ ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಮತ್ತೊಂದೆಡೆ ಐವನ್ ಡಿಸೋಜ ಹೈಕಮಾಂಡ್ ಬಳಿ ಮನವಿ ಮಾಡುವುದಾಗಿ ಕೂಡ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಬಳಿಕ ರೈ ಅವರ ಏಕಾಏಕಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದೀಗ ರೈ ಅವರ ದೆಹಲಿ ಯಾತ್ರೆ ರಾಜ್ಯ ರಾಜಕಾರಣದಲ್ಲಿ ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಹೈಕಮಾಂಡ್ ಜೊತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮಾತುಕತೆಯನ್ನು ನಡೆಸಲು ದೆಹಲಿಯತ್ತ ಮುಖಮಾಡಿದ್ದಾರೆ ಎಂದು ಕೆಲವೊಂದು ಮೂಲಗಳಿಂದ ತಿಳಿದು ಬಂದಿದೆ.
ದೆಹಲಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮತ್ತು ವಿಶ್ವನಾಥ್ ಅವರ ಜೊತೆಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ಒಂದು ಮೂಲ ತಿಳಿಸಿದೆ. ಆ ಮೂಲಕ ರೈ ಅವರು ಮುಂದಿನ ಲೋಕಸಭಾ ಚುನಾವಣ ಕಣದಲ್ಲಿ ಕಾಣಿಸಿಕೊಳ್ಳುವ ಪೂರ್ವ ತಯಾರಿಗೆ ಇದು ಮೊದಲ ಹೆಜ್ಜೆ ಎನ್ನಲಾಗುತ್ತದೆ.
ಇತ್ತೀಚಿಗೆ ಹೈಕಮಾಂಡ್ ಮಂಗಳೂರು ಲೋಕಸಭಾ ಚುನಾವಣೆಗೆ ರಮಾನಾಥ ರೈ ಹಾಗೂ ಉಡುಪಿಯಿಂದ ವಿನಯಕುಮಾರ್ ಸೊರಕೆಯವರ ಹೆಸರು ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಮಾತುಗಳು ಕೇಳಿ ಬಂದಿತ್ತು. ಪಂಚರಾಜ್ಯಗಳ ಚುನಾವಣೆಯ ಬಳಿಕ ಹುಮ್ಮಸ್ಸಿನಲ್ಲಿರುವ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಮಾಜಿ ಸಚಿವ ರೈ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬುದು ಅವರ ಆಪ್ತವಲಯದ ಮಾತು.
ಕಳೆದ ಆರು ಅವಧಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಹೆಗ್ಗಳಿಕೆ ರಮಾನಾಥ ರೈಯವರಿಗೆ ಸಲ್ಲುತ್ತದೆ. ಆದರೆ ಹಿಂದುತ್ವ ಹಾಗೂ ತನ್ನ ಕೆಲವೊಂದು ಹೇಳಿಕೆಗಳಿಂದ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿರುವ ಮಾಜಿ ಸಚಿವ ರೈ ಅವರಿಗೆ ಲೋಕಸಭೆಗೆ ಟಿಕೆಟ್ ನೀಡಬೇಕೆನ್ನುವುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.
ಆದರೆ, ದೆಹಲಿಯತ್ತ ತೆರಳಿರುವ ರಮಾನಾಥ ರೈ ಅವರು ನಿಜಕ್ಕೂ ಲೋಕಸಭಾ ಸ್ಪರ್ಧೆಗೆ ಟಿಕೆಟ್ ಕೇಳಲು ಹೈಕಮಾಂಡ್ ಭೇಟಿಯಾಗಿದ್ದಾರಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಆದರೆ, ರೈ ಯವರ ದೆಹಲಿ ಪಯಣ ಮಾತ್ರ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.