ಉಡುಪಿ,ಡಿ 19 (MSP): ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಪತಿ, ಶಿರ್ವ ಕೋಡಿಹಿತ್ಲ ನಿವಾಸಿ ರವಿ ರೋಶನ್ ನಜ್ರೆತ್ ಮತ್ತು ಆತನ ಸಹೋದರಿ ಲೀನಾ ನಜ್ರೆತ್ ಎಂಬುವವರಿಗೆ ೩ ವರ್ಷ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ 3 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ವಿ ರೋಶನ್ ನಜ್ರೆತ್ 2013ರ ಜ.14ರಂದು ಅನಿತಾ ಜುಸ್ತಿನ್ ಮೆಂಡೋನ್ಸಾ ಎಂಬವರನ್ನು ಶಿರ್ವದ ಚರ್ಚ್ನಲ್ಲಿ ಮದುವೆಯಾಗಿ, ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 20 ಪವನ್ ಚಿನ್ನವನ್ನು ಪಡೆದುಕೊಂಡಿದ್ದ. ಬಳಿಕ ಪತಿ ರವಿ ರೋಶನ್ ಸಹೋದರಿ ಲೀನಾ ನಜ್ರೆತ್ರೊಂದಿಗೆ ಸೇರಿಕೊಂಡು ಅನಿತ್ ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಲ್ಲದೆ, ಮತ್ತೆ ಮೂರು ಲಕ್ಷ ವರದಕ್ಷಿಣೆ ಬೇಡಿಕೆ ಇಟ್ಟಿದ್ದನು. ಇದರಿಂದ ಬೇಸತ್ತಾ ಅನಿತಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆಗಿನ ಶಿರ್ವ ಠಾಣೆ ಉಪನಿರೀಕ್ಷಕ ಅಶೋಕ್ ಪಿ. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿ 3ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ-ವಿವಾದವನ್ನು ಆಲಿಸಿ, ಆರೋಪಿತರ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ರಾಮ್ ಪ್ರಶಾಂತ್ರವರು ಐಪಿಸಿ ಕಲಂ.498(ಎ)ರಡಿ 2 ವರ್ಷ ಶಿಕ್ಷೆ ಮತ್ತು ಒಟ್ಟು ರೂ.5,000,ಐಪಿಸಿ ಕಲಂ.504 ರಡಿ 6 ತಿಂಗಳ ಶಿಕ್ಷೆ ಮತ್ತು ರೂ.5,000 ದಂಡ, ಐಪಿಸಿ ಕಲಂ.506 ರಡಿ 6 ತಿಂಗಳ ಶಿಕ್ಷೆ ಮತ್ತು ರೂ.5,000 ದಂಡ, ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 3ವರ್ಷ ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದ್ದಲ್ಲದೆ ದಂಡ ಪಾವತಿಸಲು ತಪ್ಪಿದ್ದಲ್ಲಿ 1 ತಿಂಗಳ ಸಾದಾರಣ ಶಿಕ್ಷೆ ವಿಧಿಸಿ ಡಿಸೆಂಬರ್ 17 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕು. ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.