ಸುಬ್ರಹ್ಮಣ್ಯ,ಡಿ 20(MSP): ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ 15 ಮಂದಿ ದಾರುಣವಾಗಿ ಸಾವನಪ್ಪಿದ್ದ ದುರ್ಘಟನೆ ಬಳಿಕ ಮುಂಜಾಗ್ರತ ಕ್ರಮವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಸುರಕ್ಷತೆ ಕ್ರಮಗಳನ್ನು ಜಾರಿಗೆ ತರಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಮೊದಲನೆಯದಾಗಿ ಸುಬ್ರಹ್ಮಣ್ಯ ದೇಗುಲದ ಪರಿಸರದಲ್ಲಿ ಪೂರ್ವಾನುಮತಿ ಇಲ್ಲದೇ ಭಕ್ತರೇ ಪ್ರಸಾದ ತಯಾರಿಸಿ ವಿತರಿಸದಂತೆ ಎಚ್ಚರ ವಹಿಸಲಿದೆ. ಹಾಗೂ ಅನ್ನದಾನದದ ಪ್ರಸಾದ ಸಿದ್ದಪಡಿಸುವ ಅಡುಗೆ ಮನೆ, ಕಚ್ಚಾ ಹಾಗೂ ಸಿದ್ಧ ಆಹಾರ ಇಡುವ ಸ್ಟಾಕ್ ರೂಂ ಹಾಗೂ ಭಕ್ತರಿಗೆ ವಿತರಿಸುವ ಲಡ್ಡು, ಪಂಚಕಜ್ಜಾಯ ಇತ್ಯಾದಿ ತಯಾರಿ ಹಾಗೂ ವಿತರಣೆ ಶೇಖರಣಾ ಕೊಠಡಿಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಅಲ್ಲದೆ ಈ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆಹಾರ ತಯಾರಿ ಮತ್ತು ಶೇಖರಣೆ ಸಂಗ್ರಹ ಸಂದರ್ಭ ಸುರಕ್ಷಾ ಕಾಯ್ದೆಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನೈವೇದ್ಯ ಮತ್ತು ಅನ್ನ ದಾಸೋಹಕ್ಕಾಗಿ ಇರುವ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದ ಕಡೆ ತಕ್ಷಣವೇ ಕ್ಯಾಮೆರಾ ಅಳವಡಿಕೆಗೆ ಆಡಳಿತ ಮುಂದಾಗಿದೆ. ದೇವಸ್ಥಾನದ ವಿವಿಧ ಕಡೆಗಳಿಗೆ ಅಳವಡಿಸಲು 54 ಸಿ.ಸಿ. ಟಿವಿ ಕ್ಯಾಮೆರಾ ಗಳ ಬೇಡಿಕೆ ಪ್ರಸ್ತಾಪವನ್ನು ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.