ಉಡುಪಿ, ಡಿ 20(MSP): ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಟೋಲ್ ಗೇಟ್ ನಿರ್ಮಿಸಿ ಸುಂಕ ವಸೂಲಿಗೆ ಮುಂದಾಗಿರುವ ಸರ್ಕಾರದ ವಿರುದ್ದ ಬೆಳ್ಮಣ್ ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 20ರ ಗುರುವಾರ ನೀಡಿದ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಯ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವಿಲ್ಲದೆ ಬಿಕೋ ಅನ್ನುತ್ತಿದೆ , ಅಂಗಡಿ ಮುಂಗಟ್ಟುಗಳು ವಹಿವಾಟು ಸ್ಥಗಿತಗೊಳಿಸಿದ್ದು, ಮುಷ್ಕರಕ್ಕೆ ಸ್ಥಳೀಯ ಶಾಲಾ ಕಾಲೇಜು, ಬ್ಯಾಂಕ್ ಗಳು ಕೂಡಾ ಬೆಂಬಲ ಘೋಷಿಸಿದೆ. ಟೋಲ್ ಗೇಟ್ ಪ್ರಸ್ತಾವನೆ ವಿರುದ್ಧ ಉದ್ಯಮಿ ಗಳು, ವರ್ತಕರು, ಸಂಘ ಸಂಸ್ಥೆಗಳು, ಬಸ್-ರಿಕ್ಷಾ-ಟ್ಯಾಕ್ಸಿ ಮಾಲಕರು, ಚಾಲಕರು, ಕೃಷಿಕರು ಬೆಂಬಲ ಸೂಚಿಸಿದ್ದಾರೆ. ಬೆಳಗ್ಗೆ 10ಕ್ಕೆ ಬೆಳ್ಮಣ್ಣು ಬಸ್ ನಿಲ್ದಾಣದಲ್ಲಿ ಪ್ರತಿಭಟನ ಸಭೆ ಮತ್ತು ಮೆರವಣಿಗೆ ನಡೆಯಲಿದ್ದು ಪ್ರತಿಭಟನೆಗೆ ಜನಸೇರತೊಡಗಿದ್ದಾರೆ.
ಇನ್ನೊಂದೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿದ್ದು, ಶಾಂತಿಕದಡದಂತೆ ಖಾಕಿ ಪಡೆ ಎಚ್ಚರ ವಹಿಸಿದೆ.
ಅಕ್ಟೋಬರ್ನಲ್ಲಿ ಬೆಳ್ಮಣ್ಣಿನಲ್ಲಿ ಸಾವಿರಾರು ಜನರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಶಾಂತಿಯುತ ಹೋರಾಟಕ್ಕೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಸ್ಥಳೀಯರು ಅಸಮಧಾನಗೊಂಡು ಇದೀಗ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.