ಉಡುಪಿ,ಡಿ 20(MSP): ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಟೋಲ್ ಗೇಟ್ ನಿರ್ಮಿಸಿ ಸುಂಕ ವಸೂಲಿಗೆ ಮುಂದಾಗಿರುವ ಸರ್ಕಾರದ ವಿರುದ್ದ ಬೆಳ್ಮಣ್ ಟೋಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ ೨೦ರ ಗುರುವಾರ ನೀಡಿದ ಹೆದ್ದಾರಿಯನ್ನು ಸಂಪೂರ್ಣ ಬಂದ್ ಪ್ರತಿಭಟನೆಯ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರತಿಭಟನೆಯ ಅಂಗವಾಗಿ ಬೆಳಗ್ಗೆ ಸುಮಾರು 10 ಗಂಟೆಗೆ ಬೆಳ್ಮಣ್ಣು ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು. ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೇಮಾರು ಮಠಾಧೀಶರಾದ ಈಶ ವಿಠಲದಾಸ ಸ್ವಾಮೀಜಿ, ನಾನು ಬೆಳ್ಮಣ್ ಪರಿಸರವಾಸಿಗಳ ಜೊತೆಯಲ್ಲಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹದ ನೆಪದಲ್ಲಿ ಜನರನ್ನು ದೋಚಲು ಬಿಡುವುದಿಲ್ಲ ಎಂದು ಅಶ್ವಾಸನೆ ನೀಡಿದರು.
ಹಿಂದು ಮುಂದು ಯೋಚನೆ ಮಾಡದೆ ನಾನು ಈ ಹೋರಾಟದಲ್ಲಿ ಧುಮುಕಿದ್ದೇನೆ. ನನ್ನ ವಿರುದ್ದ ಯಾವುದೇ ಕಾನೂನು ಕ್ರಮ ಜರಗಿಸಿದರೂ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಕಾರ್ಕಳ-ಪಡುಬಿದ್ರಿ ಹೆದ್ದಾರಿಯ ಸ್ಥಳೀಯ ನಿವಾಸಿಗಳನ್ನು ಶೋಷಣೆಯ ಮಾಡುವ ಟೋಲ್ ಸಂಗ್ರಹ ಪ್ರಸ್ತಾಪನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದರು. ಬೆಳ್ಮಾಣ್ ನಲ್ಲಿ ಟೋಲ್ ಸ್ಥಾಪಿಸುವುದು ಒಂದೇ ಜನರನ್ನು ದೋಚುವುದು ಒಂದೇ. ಪಕ್ಷಾತೀತ , ಜಾತ್ಯಾತೀತವಾದ ಟೋಲ್ ಹೋರಾಟದಲ್ಲಿ ನಾನು ಪ್ರತಿಭಟನಕಾರರೊಂದಿಗೆ ಕೈ ಜೋಡಿಸಿದ್ದೇನೆ ಎಂದರು.
ಆ ಬಳಿಕ ಮಾತನಾಡಿದ ಟೋಲ್ ಗೇಟ್ - ಸುಂಕ ವಸೂಲಾತಿ ಕೇಂದ್ರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ , ನಾವು ಯಾವುದೇ ತ್ಯಾಗ ಮಾಡಲು ಸಿದ್ಧರಿದ್ದೇವೆ, ನಾವು ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಟೋಲ್ ಗೇಟ್ ನಿರ್ಮಾಣದಿಂದ ಸಾವಿರಾರು ಗ್ರಾಮಸ್ಥರಿಗೆ ಹಾಗೂ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಬೇಡಿಕೆಯನ್ನು ಪರಿಗಣಿಸಿ ಸುಂಕ ವಸೂಲಾತಿ ಕೇಂದ್ರವನ್ನು ಶಾಶ್ವತವಾಗಿ ಸ್ಥಗಿತಗೊಸಬೇಕು ಎಂದು ಆಗ್ರಹಿಸಿದರು.