ಕಾಸರಗೋಡು, ಡಿ 20(MSP): ಕಾಸರಗೋಡಿನ ವಿದ್ಯಾನಗರದ ಕ್ವಾಟರ್ಸ್ ನಲ್ಲಿ ಮಹಿಳೆಯೋರ್ವರು ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಡಿ 20 ರ ಗುರುವಾರ ಪತ್ತೆಯಾಗಿದ್ದಾರೆ. ವಿದ್ಯಾನಗರ ಚಾಲದಲ್ಲಿರುವ ವಸತಿಗೃಹವೊಂದರಲ್ಲಿ ಕರ್ನಾಟಕ ಮೂಲದ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತಪಟ್ಟ ಮಹಿಳೆಯನ್ನು ಹುಬ್ಬಳ್ಳಿಯ ಸರಸು (30) ಎಂದು ಗುರುತಿಸಲಾಗಿದೆ. ಈಕೆಯ ಜೊತೆಗಿದ್ದ ಚಂದ್ರ (35) ಎಂಬಾತ ನಾಪತ್ತೆಯಾಗಿದ್ದಾನೆ.
ಪರಾರಿಯಾಗಿರುವ ಚಂದ್ರ ಕಾಸರಗೋಡಿನಲ್ಲಿ ಇಂಟರ್ ಲಾಕ್ ಹಾಸುವ ಕೆಲಸ ನಿರ್ವಹಿಸುತ್ತಿದ್ದ. ಕೆಲ ವರ್ಷಗಳಿಂದ ವಿದ್ಯಾನಗರ ಚಾಲದಲ್ಲಿರುವ ವಸತಿಗೃಹದಲ್ಲಿ ಇಬ್ಬರು ವಾಸವಾಗಿದ್ದರು. ಡಿ.೧೮ರ ಮಂಗಳವಾರದಂದು ಊರಿಗೆ ತೆರಳುವುದಾಗಿ ಎರಡು ಕಳೆದು ಬರುವುದಾಗಿ ತಿಳಿಸಿ ರೂಂ ನ ಕೀಲಿ ಕೈ ಮಾಲಕನಿಗೆ ನೀಡಿ ಚಂದ್ರ ಅಲ್ಲಿಂದ ತೆರಳಿದ್ದನು. ಎರಡು ದಿನ ಕಳೆದರೂ ಚಂದ್ರ ಹಿಂತಿರುಗದಿದ್ದಾಗ ಮಾಲೀಕರು ವಿಚಾರಿಸಲೆಂದು ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು .
ಈ ನಡುವೆ ಇಂದು ಬೆಳಿಗ್ಗೆ ಮಾಲಕ ಕೆಲಸದ ಸಾಮಾಗ್ರಿ ಕೊಂಡೊಯ್ಯಲು ರೂಂಗೆ ಬಂದು ಬಾಗಿಲು ತೆರೆದು ನೋಡಿದಾಗ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ, ತಕ್ಷಣ ವಿದ್ಯಾನಗರ ಹಾಗೂ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದ್ದು, ಮಾಹಿತಿ ಕಲೆ ಹಾಕಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ . ಬೆರಳಚ್ಚುತಜ್ಞರು,ಶ್ವಾನದಳ ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ . ಪರಾರಿಯಾಗಿರುವ ಚಂದ್ರಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.