ಸುರತ್ಕಲ್,ಡಿ 20(MSP): ಸುರತ್ಕಲ್-ಕಾನ-ಬಾಳ -ಎಂಆರ್’ಪಿಎಲ್ ರಸ್ತೆ ದುರವಸ್ಥೆ ಖಂಡಿಸಿ, ಚತುಷ್ಪಥ ರಸ್ತೆ ಕಾಮಗಾರಿ ಟೆಂಡರು ರದ್ದುಪಡಿಸಿ ದುರಸ್ಥಿ ಕೆಲಸಕ್ಕೆ ಕೋಟ್ಸಂತರ ಹಣವನ್ನು ಪೋಲು ಮಾಡುತ್ತಿರುವ ಸರಕಾರದ ನೀತಿಯನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಡಿ.೧೯ ರಂದು ಬಿಎಎಸ್ಎಎಫ್ ಬಳಿಯಿಂದ ಕಾನ ಜಂಕ್ಷನ್ ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಬಿ.ಕೆ ಇಮ್ತಿಯಾಜ್ ರಸ್ತೆಯ ಅಭಿವೃಧ್ಧಿಗಾಗಿ ಒತ್ತಾಯಿಸಿ ಕಳೆದ ಎರಡು ವರ್ಷದಲ್ಲಿ ೨೦ಕ್ಕೂ ಹೆಚ್ಚು ಹೋರಾಟಗಳು ನಡೆದಿದೆ. ಆದರೂ ಸಂಬಂಧಪಟ್ಟವರು ಸ್ಪಂದಿಸಿಲ್ಲ. ಜನರ ನಿರಂತರ ಪ್ರತಿಭಟನೆಯ ಪ್ರತಿಫಲವಾಗಿ 58ಕೋಟಿ ಗಳ ಚತುಷ್ಪಥ ರಸ್ತೆಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ಮುಗಿಸಿ ಶಿಲಾನ್ಸಾಸ ಕಾರ್ಯಕ್ರಮವನ್ನು ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಡೆಸಿತ್ತು . ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟೆಂಡರ್ ರದ್ದುಗೊಳಿಸಿ ಜನರಿಗೆ ವಂಚನೆ ಎಸಗಲಾಗಿದೆ.
ಜನರ ಕಣ್ಣಿಗೆ ಮಣ್ಣೆರಚಲಿಕ್ಕಾಗಿ 1.20ಕೋಟಿ ರೂಪಾಯಿಗಳನ್ನು ದುರಸ್ಥಿ ಕೆಲಸಕ್ಕೆ ನಗರಪಾಲಿಕೆ ಮುಂದಾಗಿರುವುದು ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುವ ದುಷ್ಕೃತ್ಯ ಎಂದು ಆಪಾದಿಸಿದರು. ಬೃಹತ್ ಕೈಗಾರಿಕೆಗಳಿಗೆ ಬರುವ ಬೃಹತ್ ಲಾರಿಗಳು ಯಥೇಚ್ಚವಾಗಿ ಬಳಸುವ ರಸ್ತೆಗೆ ಯಾವ ದುರಸ್ಥಿ ಕೆಲಸಗಳು 3 ತಿಂಗಳ ಬಾಳಿಕೆಯೂ ಬರುವುದಿಲ್ಲ. ಹಾಗಾಗಿ ದುರಸ್ಥಿ ಕೆಲಸ ಮಾಡಲು ಪಾಲಿಕೆ ಮುಂದಾದರೆ ತಡೆಯುವಂತಹ ತೀವ್ರತರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದರು. ತಕ್ಷಣ ಸಮಸ್ಯೆಗೆ ಸ್ಪಂದಿಸದಿದ್ದರೆ ಜನವರಿ 8 ಈ ರಸ್ತೆಯಲ್ಲಿ ಸಂಚಾರ ಬಂದ್ ಗೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಅಹೂಬಕ್ಕರ್ ಬಾವ ,ಸಹ ಸಂಚಾಲಕರಾದ ನವೀನ್ ಪೂಜಾರಿ, ಶ್ರೀನಾಥ್ ಕುಲಾಲ್, ಸ್ಥಳೀಯ ಮುಖಂಡರಾದ ಕರುಣಾಕರ ಶೆಟ್ಟಿ,ಹಮೀದ್ ಕಟ್ಲ,ಫ್ರಾನ್ಸಿಸ್ ಕಾನ,ರೆಮ್ಮಿ ಡಿಸೋಜ,ಜೋಯ್ ಡಿಸೋಜ ಕಾನ,ಅಜ್ಮಲ್ ಕಾನ,ಬಿ ಕೆ ಮಕ್ಸೂದ್,ಐ. ಮೊಹಮ್ಮದ್,ಮುಸ್ತಫಾ ಅಂಗರಗುಂಡಿ,ಹಂಝ ಮೈಂದಗುರಿ,ರಹೀಮ್ ಕಾನ,ಮೆಹಬೂಬ್ ಖಾನ್,ಗಿರೀಶ್ ಜನಕಾಕಾಲನಿ,ಬಾಬು ಮೈಂದಗುರಿ,ಇಬ್ರಾಹಿಂ ಎಂ ಎಚ್,ಅಜರ್ ಕಾನ, ಫಾರುಕ್ ಜನತಾಕಾಲನಿ ಮತ್ತಿತರರು ಉಪಸ್ಥಿತರಿದ್ದರು.